ಯಲ್ಲಾಪುರ: ಮಧು ಹೊಟೇಲ್ ಮಾಲಕ ಮಧುಕೇಶ್ವರ ಭಟ್ಟ ಅವರ ಮನೆಗೆ ನುಗ್ಗಿ 50 ಸಾವಿರ ರೂ ಹಣ ಕದ್ದಿದ್ದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ. ಮಾಗೋಡು ಕ್ರಾಸಿನ ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಭಾಸ್ಕರ ಸಿದ್ದಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಹಣವನ್ನು ಮರಳಿಸಿದ್ದಾನೆ.
ಯಲ್ಲಾಪುರದ ಹಳೆ ತಹಶೀಲ್ದಾರ್ ಕಚೇರಿ ಮುಂದೆ ಮಧುಕೇಶ್ವರ ಭಟ್ಟ ಅವರು ಹೊಟೇಲ್ ನಡೆಸುತ್ತಿದ್ದು, ದುಡಿದ ಹಣವನ್ನು ರವೀಂದ್ರ ನಗರದಲ್ಲಿರುವ ಅವರ ಮನೆಯಲ್ಲಿರಿಸಿದ್ದರು. ಡಿ 13ರ ರಾತ್ರಿ ಅವರು ಇಲ್ಲದ ವೇಳೆ ಮನೆಗೆ ನುಗ್ಗಿದ ಅಂಕೋಲಾ ಬಾಳೆಗದ್ದೆಯ ಭಾಸ್ಕರ ಸಿದ್ದಿ ಕಪಾಟಿನೊಳಗೆ ಸೀರೆಯಲ್ಲಿ ಸುತ್ತಿದ್ದ 50 ಸಾವಿರ ರೂ ಹಣ ಎಗರಿಸಿದ್ದ. ಡಿ 14ರಂದು ಮನೆ ಬಾಗಿಲು ಒಡೆದಿರುವುದು ಹಾಗೂ ಕಾಸು ಕಾಣೆಯಾಗಿರುವುದನ್ನು ನೋಡಿದ ಮಧುಕೇಶ್ವರ ಭಟ್ಟರು ಪೊಲೀಸ್ ದೂರು ನೀಡಿದ್ದರು.
ಈ ದೂರಿನ ಬಗ್ಗೆ ಸಿಪಿಐ ರಮೇಶ ಹಾನಾಪುರ ಅವರು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹಾಗೂ ಪೊಲೀಸ್ ಉಪಾಧ್ಯಕ್ಷ ಗಣೇಶ ಕೆ ಎಲ್ ಅವರಿಗೆ ಮಾಹಿತಿ ರವಾನಿಸಿದರು. ಅದಾದ ನಂತರ ಪಿಎಸ್ಐ ಶೇಡಜಿ ಚೌಹಾಣ್ ಕಳ್ಳನ ಪತ್ತೆಗೆ ಹುಡುಕಾಟ ನಡೆಸಿದರು. ಪೊಲೀಸ್ ಸಿಬ್ಬಂದಿ ಬಸವರಾಜ ಹಗೇರಿ, ಉಮೇಶ ತುಂಬರಗಿ, ಅಮರ್ ಜಿ, ಶೋಭಾ ನಾಯ್ಕ ಸೇರಿ ಮಾಗೋಡು ಕ್ರಾಸಿನ ಬಳಿ ಅಲೆದಾಡುತ್ತಿದ್ದ ಭಾಸ್ಕರ ಸಿದ್ದಿಯನ್ನು ಠಾಣೆಗೆ ಕರೆ ತಂದರು.
ಖಾಕಿ ಬಟ್ಟೆ ನೋಡಿದ ತಕ್ಷಣ ಭಾಸ್ಕರ ಸಿದ್ದಿ ಕದ್ದ ಹಣವನ್ನು ಮರಳಿಸಿದ್ದು, ತಾನೇ ಕದ್ದಿರುವುದಾಗಿ ಒಪ್ಪಿಕೊಂಡಿದ್ದ. ಅದಾಗಿಯೂ ಮನೆ ಮುರಿದು ಕಳ್ಳತನ ಮಾಡಿದ ಕಾರಣ ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದರು.