`ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಿ ಬುಡಕಟ್ಟು ಜನಾಂಗದವರು ಸೋತಿದ್ದು, ಈವರೆಗೂ ಅರಣ್ಯ ಭೂಮಿ ಹಕ್ಕು ಸಿಕ್ಕಿಲ್ಲ’ ಎಂದು ಸಿದ್ದಿ ಸಮುದಾಯದವರು ಕಾನೂನು ಜಾಗೃತಿ ಜಾಥಾದಲ್ಲಿ ಅಸಮಧಾನವ್ಯಕ್ತಪಡಿಸಿದರು. `ಕಾನೂನು ತಿಳುವಳಿಕೆಯೊಂದಿಗೆ ಹೋರಾಟ ನಡೆಸಿದರೆ ಎಂದಿಗೂ ಸೋಲಿಲ್ಲ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಈ ವೇಳೆ ನೆರೆದಿದ್ದವರನ್ನು ಸಮಾಧಾನ ಮಾಡಿದರು.
ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಮಹಾಗಣಪತಿ ದೇವಾಲಯದ ಸಂಭಾಗಣದಲ್ಲಿ ಸೋಮವಾರ ಅರಣ್ಯ ಜಾಗೃತಿ ಜಾಥಾ ನಡೆದಿದ್ದು, ಅಲ್ಲಿಗೆ ಆಗಮಿಸಿದವರು ಪ್ರಶ್ನೆಗಳ ಸುರಿಮಳೆ ಸುರಿದರು. `ಸಾಗುವಳಿ ಮಾಡುತ್ತಿದ್ದೇವೆ. ಅರ್ಜಿ ಕೊಟ್ಟಿದ್ದೇವೆ. ಜಿಪಿಎಸ್ ಆಗಿಲ್ಲ. ಕಾಯ್ದೆ ಬಗ್ಗೆ ಅಧಿಕಾರಿಗಳು ಹೇಳುತ್ತಿಲ್ಲ’ ಎಂಬುದನ್ನು ಸೇರಿ ಸಾಕಷ್ಟು ಸಮಸ್ಯೆಗಳ ಬಗ್ಗೆ ವಿವರಿಸಿದರು. `ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದಿದೆ. ಆದರೆ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ, ಕಿರುಕುಳ ತಪ್ಪಿಲ್ಲ. ಹಕ್ಕು ಪತ್ರ ನೀಡಿದವರಿಗೆ ಪಹಣ ಪತ್ರದಲ್ಲಿ ಹೆಸರು ದಾಖಲಾಗಿಲ್ಲ. ಬುಡಕಟ್ಟು ಜನಾಂಗದ ಭೂಮಿ ಹಕ್ಕುದಾರರಿಗೆ ಸರಕಾರದ ಸೌಲಭ್ಯ ಸಿಗುತ್ತಿಲ್ಲ’ ಎಂಬುದರ ಬಗ್ಗೆ ಹೇಳಿಕೊಂಡರು.
`ಕಾನೂನು ಜಾರಿಗೆ ಬಂದು 18 ವರ್ಷವಾದರೂ ಜಿಲ್ಲೆಯಲ್ಲಿ ಶೇ 10ರಷ್ಟು ಅರಣ್ಯವಾಸಿಗಳ ಅರ್ಜಿ ಮಂಜೂರಾಗಿಲ್ಲ. ಶೇ 72ರಷ್ಟು ಅರಣ್ಯವಾಸಿಗಳ ಜಿಪಿಎಸ್ ಸರಿಯಾಗಿಲ್ಲ. ಜಿಲ್ಲೆಯಲ್ಲಿ 87,757 ಅರ್ಜಿ ಸಲ್ಲಿಕೆಯ ಪೈಕಿ 69,733 ಅರ್ಜಿಗಳು ತಿರಸ್ಕಾರವಾಗಿದೆ. 2,852 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ’ ಎಂದು ರವೀಂದ್ರ ನಾಯ್ಕ ಸಭೆಯಲ್ಲಿದ್ದವರಿಗೆ ಮಾಹಿತಿ ನೀಡಿದರು.
`ಅರಣ್ಯವಾಸಿಗಳ ಅರಣ್ಯ ಭೂಮಿ ಮಂಜೂರಿಗೆ ಕಾನೂನು ತಿಳುವಳಿಕೆ ಅವಶ್ಯ. ಕಾನೂನು ಜ್ಞಾನದ ಕೊರತೆಯೂ ಭೂಮಿ ಹಕ್ಕಿನಿಂದ ವಂಚಿತರಾಗಲು ಮುಖ್ಯ ಕಾರಣ’ ಎಂದವರು ಮನವರಿಕೆ ಮಾಡಿದರು. ಸಂಘಟನೆ ತಾಲೂಕಾ ಅಧ್ಯಕ್ಷ ಬೀಮಶಿ ವಾಲ್ಮಕೀ, ಮಹೇಶ ಮರಾಠಿ, ಭಾಸ್ಕರ ಗೌಡ, ವಿನೋದ ತಳಕೇರಿ, ಚಂದ್ರು ಪೂಜಾರಿ, ಬೀರಪ್ಪ ಬಿಳ್ಕಿ, ಕೃಷ್ಣ ನಾಯರ್, ನರಸಿಂಹ ನಾಯ್ಕ ಮೊದಲಾದವರು ಈ ಮಾತಿಗೆ ತಲೆಯಾಡಿಸಿದರು.