ಯಲ್ಲಾಪುರ ತಾಲೂಕು ಆಸ್ಪತ್ರೆಯ ಕರ್ತವ್ಯನಿರತ ವೈದ್ಯಕೀಯ ಸಿಬ್ಬಂದಿ ಮೇಲೆ ಮಹಿಳೆಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲಿದ್ದ ವೈದ್ಯರು ಹಾಗೂ ಆರೈಕೆದಾರರಿಗೆ ಕೆಟ್ಟದಾಗಿ ನಿಂದಿಸಿ, ಚಪ್ಪಲಿ ತೋರಿಸಿದ್ದಾರೆ.
ಮಾರ್ಚ 14ರ ರಾತ್ರಿ ನಂದೂಳ್ಳಿ ಭಾಗದ ಸೋನಾರಜಡ್ಡಿಯ ವ್ಯಕ್ತಿಯೊಬ್ಬರಿಗೆ ಉಸಿರಾಟದ ಸಮಸ್ಯೆ ಕಾಣಿಸಿತು. ಆ ರೋಗಿ ಸೇರಿ ಒಂದೇ ಬೈಕಿನಲ್ಲಿ ಮೂವರು ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆ ವೈದ್ಯರು ರೋಗಿಯನ್ನು ಆರೈಕೆ ಮಾಡಿದರು. ರೋಗಿಯ ಸ್ಥಿತಿ ಸಹಜವಾಗಿದ್ದು, ಈ ಬಗ್ಗೆ ಸಂಬoಧಿಕರಿಗೆ ವೈದ್ಯರು ಮನವರಿಕೆ ಮಾಡಿದರು.
ರೋಗಿ ಜೊತೆ ಬಂದಿದ್ದ ಸೋನಾರಜಡ್ಡಿಯ ಆಶಾ ಕಾರ್ಯಕರ್ತೆಯೂ ಆಗಿರುವ ಲಿಲ್ಲಿ ಸಿದ್ದಿ ವೈದ್ಯರ ಮಾತು ನಂಬಲಿಲ್ಲ. `ರೋಗಿಗೆ ಆಕ್ಸಿಜನ್ ಅಳವಡಿಸಿ’ ಎಂದು ತಾಕೀತು ಮಾಡಿದರು. `ಯಾವುದೇ ಸಮಸ್ಯೆ ಇಲ್ಲದೇ ಆಕ್ಸಿಜನ್ ಅಳವಡಿಸಲು ಅಸಾಧ್ಯ’ ಎಂದು ವೈದ್ಯರು ವಿವರಿಸಿದರು. ಇದಕ್ಕೆ ಒಪ್ಪದೇ ಲಲ್ಲಿ ಸಿದ್ದಿ ಗಲಾಟೆ ಮಾಡಿದರು. `ಆಸ್ಪತ್ರೆ ಆವರಣದಲ್ಲಿ ಗಲಾಟೆ ಮಾಡಬೇಡಿ‘ ಎಂದು ಅಲ್ಲಿದ್ದ ಭದ್ರತಾ ಸಿಬ್ಬಂದಿ ಹೇಮಂತ್ ಎಚ್ಚರಿಸಿದರು.
ಇದರಿಂದ ಸಿಟ್ಟಾದ ಲಿಲ್ಲಿ ಸಿದ್ದಿ ಎದುರಿಗಿದ್ದ ವೈದ್ಯರು ಹಾಗೂ ಆರೈಕೆದಾರರ ಮೇಲೆ ಹಲ್ಲೆಗೆ ಪ್ರಯತ್ನಿಸಿದರು. ತಡೆಯಲು ಬಂದ ಭದ್ರತಾ ಸಿಬ್ಬಂದಿ ಹೇಮಂತ್ ಹಾಗೂ ಶುಶ್ರುಶಕ ರಾವುತಪ್ಪ ಮಾದರ್ ಅವರಿಗೆ ಚಪ್ಪಲಿ ತೋರಿಸಿದರು. ಇದರಿಂದ ಆಸ್ಪತ್ರೆ ಆವರಣದಲ್ಲಿ ಗೊಂದಲ ಉಂಟಾಗಿದ್ದು, ಲಲಿತಾ ಸಿದ್ದಿ ಅವರ ಕೂಗಾಟದಿಂದ ಇತರೆ ಆರೋಗ್ಯ ಸಿಬ್ಬಂದಿ ಭಯಗೊಂಡರು. ಇತರೆ ರೋಗಿಗಳು ಸಹ ಕಂಗಾಲಾದರು.
ಈ ಎಲ್ಲಾ ವಿಷಯಗಳ ಬಗ್ಗೆ ಆರೋಗ್ಯ ಸಿಬ್ಬಂದಿ ಆಡಳಿತ ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರಿಗೆ ದೂರು ನೀಡಿದರು. ಘಟನಾವಳಿಗಳ ವಿವರ ಪಡೆದ ಡಾ ನರೇಂದ್ರ ಪವಾರ್ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಆಸ್ಪತ್ರೆಗೆ ಅಗತ್ಯ ಭದ್ರತೆ ನೀಡುವಂತೆಯೂ ಡಾ ನರೇಂದ್ರ ಪವಾರ್ ಕೋರಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.