ಭೂ ಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾದರೆ ಮೂರು ವರ್ಷ ಜೈಲು ಖಚಿತ. ಜೊತೆಗೆ 25 ಸಾವಿರ ರೂ ದಂಡವೂ ನಿಶ್ಚಿತ!
`ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಗರ ಪ್ರದೇಶದಲ್ಲಿನ ಸರ್ಕಾರಿ ಒಡೆತನದಲ್ಲಿರುವ ಪ್ರದೇಶ ಅತಿಕ್ರಮಣ ನಡೆಸಿದವರ ಮೇಲಿನ ಕಾನೂನು ಸಡಲಿಕೆ ಅವಶ್ಯ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. ಭಟ್ಕಳದಲ್ಲಿ ಮಾತನಾಡಿದ ಅವರು `ನಗರ ಪಾಲಿಕೆ ಪರಿಮಿತಿಯಿಂದ 10 ಕಿ.ಮೀ ಪರಿಮಿತಿಯೊಳಗಿನ ಭೂಮಿ, ನಗರ ಸಭೆಗಳ ಪರಿಮಿತಿಯಿಂದ 5 ಕಿಮೀ ಒಳಗಿನ ಭೂಮಿ ಅತಿಕ್ರಮಣದಾರರಿಗೆ ಕಠಿಣ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸುವ ಸಾಧ್ಯತೆಗಳಿವೆ’ ಎಂದು ವಿವರಿಸಿದರು.
`ಪುರಸಭೆ ಮತ್ತು ಪಟ್ಟಣ ಪಂಚಾಯತ್ ಪರಿಮಿತಿಯಿಂದ 3 ಕಿಮೀ ಒಳಗಿನ ಸರ್ಕಾರದ ಒಡೆತನದ ನಿಯಂತ್ರಣ ಮತ್ತು ವ್ಯವಸ್ಥಾಪನೆಯಲ್ಲಿರುವ ಭೂಮಿ ಅತಿಕ್ರಮಿಸಿದ್ದಲ್ಲಿ ಸಾಗುವಳಿ ಮಾಡಿದ ಸಾಗುವಳಿದಾರನ್ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಕಾನೂನಿನಲ್ಲಿ ಉಲ್ಲೇಖವಿದೆ’ ಎಂಬ ಮಾಹಿತಿ ನೀಡಿದರು.
ಪ್ರಮುಖರಾದ ದೇವರಾಜ ಗೊಂಡ, ಪಾಂಡುರoಗ ನಾಯ್ಕ ಬೆಳಕೆ, ಚಂದ್ರು ನಾಯ್ಕ ಬೆಳಕೆ, ಶಬ್ಬೀರ್ ಸಾಬ ಭಟ್ಕಳ, ಚಂದ್ರು ನಾಯ್ಕ ಗೊರಟೆ, ದಯಾನಂದ ಹಸರವಳ್ಳಿ, ನಾಗರಾಜ ಹಸರವಳ್ಳಿ, ಸಂತೋಷ ಗೊರಟೆ, ಕಯ್ಯುಮ ಕೋಲಾ ಭಟ್ಕಳ, ರತ್ನಾ ಬೆಳಕೆ, ಮಾದೇವಿ ಕರಿಕಲ್ ಉಪಸ್ಥಿತರಿದ್ದರು.