ಶತ ಶತಮಾನಗಳಿಂದ ಒಂದಕ್ಕೊoದು ಅಂಟಿಕೊoಡಿದ್ದ ಭಾರೀ ಪ್ರಮಾಣದ ಕಲ್ಬಂಡೆಗಳು ಬುಧವಾರ ಬೆಳಗ್ಗೆ ದಿಢೀರ್ ಆಗಿ ನೆಲಕ್ಕೆ ಉರುಳಿದೆ. ದೊಡ್ಡ ದೊಡ್ಡ ಗಾತ್ರದ ಐದಾರು ಬಂಡೆಗಳು ಉರುಳಿ ಬಿದ್ದ ಸದ್ದಿಗೆ ಕೊಡ್ಲಗದ್ದೆ ಊರು ಬೆಚ್ಚಿಬಿದ್ದಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ-ಯಲ್ಲಾಪುರದ ಗಡಿಭಾಗ ಕೊಡ್ಲಗದ್ದೆ. 20 ಕುಟುಂಬದವರ ಸಾಮೂಹಿಕ ಸೊಪ್ಪಿನ ಬೆಟ್ಟ ಪ್ರದೇಶದಲ್ಲಿ ಹಿಂದಿನಿoದಲೂ ಕಲ್ಪಂಡೆಗಳಿದ್ದವು. ಈ ಪೈಕಿ ಐದಾರು ಬಂಡೆಗಳು ಬುಧವಾರ ಬೆಳಗ್ಗೆ 9 ಗಂಟೆಗೆ ಅಂದಾಜು 50 ಅಡಿ ಎತ್ತರದಿಂದ ಅವು ನೆಲಕ್ಕುರುಳಿದವು. ಇನ್ನೂ ಒಂದು ಎಕರೆ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಒಂಟಿ ಬಂಡೆಯಿದ್ದು, ಅದು ಸಹ ಉರುಳಿ ಬೀಳುವ ಆತಂಕ ಎದುರಾಗಿದೆ.
ಬಂಡೆಗಳು ಉರುಳಿ ಬಿದ್ದಿದ್ದರಿಂದ ಸರಾಗವಾಗಿ ಹರಿಯುತ್ತಿದ್ದ ನೀರಿನ ಕಾಲುವೆ ಮುಚ್ಚಿ ಹೋಗಿದೆ. ಹೀಗಾಗಿ ವಿಶ್ವನಾಥ ಹೆಬ್ಬಾರ್ ಅವರ ತೋಟಕ್ಕೆ ನೀರು ಹೋಗುತ್ತಿಲ್ಲ. ಬಂಡೆ ಬಿದ್ದ ಪ್ರದೇಶದಲ್ಲಿಯೇ ಕಾಲುವೆ ನೀರು ಉಕ್ಕಿ ಹರಿಯುತ್ತಿದ್ದು, ವಿಶ್ವೇಶ್ವರ ಸುಬ್ರಾಯ ಗಾಂವ್ಕರ್ ಜೋಗಿಮನೆ ಅವರ ತೋಟ ಜಲಾವೃತವಾಗುತ್ತಿದೆ. ಭಾರೀ ಪ್ರಮಾಣದ ಕಲ್ಲಿನ ಬಂಡೆಗಳು ವಿಶ್ವೇಶ್ವರ ಸುಬ್ರಾಯ ಗಾಂವ್ಕರ್ ಅವರ ಮಾಲ್ಕಿ ಭೂಮಿಯಲ್ಲಿ ಬಿದ್ದಿದ್ದರಿಂದ ಅಡಿಕೆ-ತೆಂಗಿನ ಮರಗಳಿಗೂ ಅಲ್ಪ ಪ್ರಮಾಣದ ಹಾನಿಯಾಗಿದೆ.
ಮೊದಲ ಬಾರಿ ಬಂಡೆ ನೆಲಕ್ಕೆ ಉರುಳಿದ ಮುಕ್ಕಾಲು ತಾಸಿನ ನಂತರ ಮತ್ತೊಂದು ಬೃಹತ್ ಬಂಡೆ ತೋಟದ ಕಡೆ ಬಂದು ಬಿದ್ದಿದೆ. ಹಂತ ಹಂತವಾಗಿ ಬಂಡೆಗಳು ನೆಲಕ್ಕೆ ಉರುಳುತ್ತಿರುವುದರಿಂದ ಜನರ ಆತಂಕ ಹೆಚ್ಚಾಗಿದೆ. ಅಲ್ಲಿ ಎಲ್ಲಿಯೂ ದೊಡ್ಡ ಯಂತ್ರಗಳು ಕೆಲಸ ಮಾಡುತ್ತಿಲ್ಲ. ಭೂ ಕಂಪನದ ಅನುಭವ ಸಹ ಆಗಿಲ್ಲ. ಏಕಾಏಕಿ ಬಂಡೆಗಳು ಉರುಳಿ ಬಿದ್ದಿರುವುದು ಊರಿನವರ ಅಚ್ಚರಿಗೆ ಕಾರಣವಾಗಿದೆ.
ಇನ್ನೂ, ಮಂಗಳವಾರ ಸಂಜೆ 5 ಗಂಟೆಯವರೆಗೂ ಕಾರ್ಮಿಕರು ಇದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಗ್ಗೆ ಕಾರ್ಮಿಕರು ಕೆಲಸಕ್ಕೆ ತೆರಳುವ ಪೂರ್ವದಲ್ಲಿ ಬಂಡೆಗಳು ಅಪ್ಪಳಿಸಿದ್ದರಿಂದ ಭಾರೀ ಪ್ರಮಾಣದ ಅನಾಹುತ ತಪ್ಪಿದೆ. ಬಂಡೆಗಳು ಉರುಳಿ ಬಿದ್ದಿರುವ ಫೋಟೋ-ಮಾಹಿತಿಯನ್ನು ಅಲ್ಲಿನವರು ಕಂದಾಯ ಇಲಾಖೆಗೆ ಕಳುಹಿಸಿದ್ದಾರೆ.
ಆದರೆ, ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದ ಹಿನ್ನಲೆ ಕಂದಾಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಅರಣ್ಯ ಇಲಾಖೆಯ ಕೆಳ ಹಂತದ ನೌಕರರು ಆಗಮಿಸಿ ಫೋಟೋ ಪಡೆದು ಹೋಗಿದ್ದಾರೆ. ನೆಲಕ್ಕೆ ಅಪ್ಪಳಿಸಿದ ಬಂಡೆಗಳನ್ನು ತೆರವು ಮಾಡಿ, ಅನಾಹುತ ನಡೆಯದಂತೆ ಮುನ್ನಚ್ಚರಿಕೆವಹಿಸಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.