ಪಶ್ಚಿಮಘಟ್ಟ ಹಾಗೂ ಕರಾವಳಿ ಪ್ರದೇಶದಲ್ಲಿನ ಭೂ ಕುಸಿತದ ಬಗ್ಗೆ ತಜ್ಞರು 2021ರ ಫೆಬ್ರವರಿಯಲ್ಲಿಯೇ ಅಧ್ಯಯನ ವರದಿಯನ್ನು ನೀಡಿದ್ದರು. ಆದರೂ, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದ ಕಾರಣ ಭೂ ಕುಸಿತದ ಅವಾಂತರಗಳು ಮುಂದುವರೆದಿದೆ.
2019ರಲ್ಲಿ ಕಾರವಾರದ ಕಡವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತವಾಗಿತ್ತು. ಆಗ ಜೀವ ವೈವಿಧ್ಯ ಮಂಡಳಿಯವರು ಈ ಬಗ್ಗೆ ಅಧ್ಯಯನ ನಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಅದರ ಪ್ರಕಾರ ಕರ್ನಾಟಕ ಸರ್ಕಾರದ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಿಂದ ಭೂ ಕುಸಿತ ಅಧ್ಯಯನ ಸಮಿತಿ ರಚಿಸಿ ಅಧ್ಯಯನ ನಡೆಸಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಭೂ ಕುಸಿತ ಪ್ರದೇಶಗಳನ್ನು ಗುರುತಿಸಿ, ಭೂ ಕುಸಿತ ತಡೆಗೆ ಕೈಗೊಳ್ಳಬೇಕಾದ ತುರ್ತು ಕೆಲಸಗಳ ಬಗ್ಗೆ ಅದರಲ್ಲಿ ತಜ್ಞರು ವಿವರಿಸಿದ್ದರು. ಆದರೆ, ಮೂರುವರೆ ವರ್ಷ ಕಳೆದರೂ ತಜ್ಞರು ನೀಡಿದ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರ ಪರಿಣಾಮವಾಗಿ ಭೂ ಕುಸಿತ ಮುಂದುವರೆದಿದ್ದು, ಇನ್ನಷ್ಟು ಜೀವಗಳು ಬಲಿಯಾಗಿದೆ. ಅನೇಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದೆ.
ಮಳೆಗಾಲದ ಅವಧಿಯಲ್ಲಿ ಭೂ ಕುಸಿತ ತಡೆ ದೊಡ್ಡ ಸವಾಲಾಗಿದ್ದು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ, ಯಲ್ಲಾಪುರ, ಹಾಗೂ ಜೊಯಿಡಾದಲ್ಲಿ ಭೂ ಕುಸಿತದ ಪ್ರಮಾಣ ಜಾಸ್ತಿಯಿರುವ ಬಗ್ಗೆ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. `ಕಾಡು ನಾಶ, ಬಸಿಗಾಲುವೆಗಳ ವಿನಾಶ, ಗಣಿಗಾರಿಕೆ, ಇಳಿಜಾರುಗಳನ್ನು ತುಂಡರಿಸಿರುವುದು, ಅರಣ್ಯಭೂಮಿ ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಸಹ ಭೂ ಕುಸಿತಕ್ಕೆ ಮುಖ್ಯ ಕಾರಣ’ ಎಂದು ವರದಿಯಲ್ಲಿ ಬರೆಯಲಾಗಿದೆ. ಕೇಂದ್ರ ಸರ್ಕಾರದ `ಲ್ಯಾಂಡ್ ಸ್ಲಿಪ್’ ಯೋಜನೆಯನ್ನು ಇಲ್ಲಿಗೂ ವಿಸ್ತರಿಸುವ ಬಗ್ಗೆ ವರದಿ ಹಕ್ಕೊತ್ತಾಯ ಮಾಡಿದೆ. `ಸಮಗ್ರ ಭೂ ಕುಸಿತ ನಿಯಂತ್ರಣ ಮಾರ್ಗೋಪಾಯ ಕಾರ್ಯಯೋಜನೆ’ ಸಿದ್ಧಪಡಿಸಲು ವರದಿಯಲ್ಲಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇಸ್ರೋ ವಿಜ್ಞಾನಿಗಳು, ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದವರು ಈ ಸಮಿತಿಯಲ್ಲಿದ್ದರು. ಪಶ್ಚಿಮ ಕಾರ್ಯಪಡೆಯ ಅನಂತ ಅಶೀಸರ ಸಮಿತಿ ಅಧ್ಯಕ್ಷರಾಗಿದ್ದು, ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ ಕೇಶವ ಕೂರ್ಸೆ, ಪರಿಸರ ಶಾಸ್ತ್ರಜ್ಞ ಡಾ ಟಿ ವಿ ರಾಮಚಂದ್ರ, ಜಿಯಾಲಾಜಿಕ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿ ಡಾ ಮಾರುತಿ, ಭೂ ವಿಜ್ಞಾನಿ ಡಾ ಶ್ರೀನಿವಾಸ ರೆಡ್ಡಿ ತಜ್ಞ ಸದಸ್ಯರಾಗಿ ಓಡಾಟ ನಡೆಸಿದ್ದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕಂದಾಯ, ಗಣಿ, ಭೂ ಗರ್ಭ ಶಾಸ್ತ್ರಇಲಾಖೆಯ ಅಧಿಕಾರಿಗಳನ್ನು ಸಮಿತಿಗೆ ಸೇರಿಸಿಕೊಂಡು ಅಧ್ಯಯನ ನಡೆಸಲಾಗಿತ್ತು. ಜನರ ಅಹವಾಲು, ನೊಂದವರ ಹೇಳಿಕೆ, ಪರಿಹಾರದ ಕಾರ್ಯಸೂಚಿಗಳ ಪಟ್ಟಿಯನ್ನು ಸಿದ್ಧಪಡಿಸಿದ ಸಮಿತಿ ಈ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿತ್ತು.
Discussion about this post