ಬೀದಿ ನಾಯಿಗಳ ನಿಗ್ರಹ ಸರ್ಕಾರದ ಮುಖ್ಯ ಜವಾಬ್ದಾರಿ. ಇದರೊಂದಿಗೆ ಬೀದಿ ನಾಯಿ ದಾಳಿಗೆ ಒಳಗಾದವರಿಗೆ ಪರಿಹಾರ ನೀಡುವುದು ಸಹ ಸ್ಥಳೀಯ ಸಂಸ್ಥೆಗಳ ಹೊಣೆ. ಬೀದಿ ನಾಯಿ ಆಕ್ರಮಣಕ್ಕೆ ಒಳಗಾದವರಿಗೆ 5 ಸಾವಿರ ರೂ ಹಾಗೂ ಬೀದಿ ನಾಯಿ ದಾಳಿಯಿಂದ ಸಾವನಪ್ಪಿದ ವ್ಯಕ್ತಿ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಕೊಡಬೇಕು ಎನ್ನುತ್ತದೆ ಕಾನೂನು!
ಬೀದಿ ನಾಯಿಗಳ ವಿಷಯವಾಗಿ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಸಮಿತಿ ರಚಿಸಬೇಕು. ಈ ಸಮಿತಿ ಸದಸ್ಯರು ಬೀದಿ ನಾಯಿ ದಾಳಿಗೆ ಒಳಗಾದವರಿಗೆ ತಕ್ಷಣ ಸೂಕ್ತ ಚಿಕಿತ್ಸೆ ಕೊಡಿಸಬೇಕು. ನಾಯಿ ದಾಳಿ ಒಳಗಾದ ಸ್ಥಳ ಪರಿಶೀಲನೆ ನಡೆಸಬೇಕು. ರೋಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಆ ಎಲ್ಲಾ ವೆಚ್ಚವನ್ನು ಸ್ಥಳೀಯ ಸಂಸ್ಥೆಯವರೇ ಪಾವತಿಸಬೇಕು. ಪರಿಹಾರ ವಿತರಣೆಗಾಗಿ ಪೊಲೀಸ್, ಆರೋಗ್ಯಾಧಿಕಾರಿ ವರದಿ ಪಡೆದು 48 ಗಂಟೆಗಳ ಒಳಗೆ ಸರ್ಕಾರಕ್ಕೂ ಮಾಹಿತಿ ನೀಡಬೇಕು ಎಂಬುದು ಈ ನಿಯಮದಲ್ಲಿದೆ.
ಭಾರತ ಸರ್ಕಾರದ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಮಂತ್ರಾಲಯವೂ 2023ರಲ್ಲಿ ಪ್ರಾಣಿ ಸಂತಾನ ನಿಯಮವನ್ನು ಪ್ರಕಟಿಸಿದೆ. ರಾಜ್ಯಮಟ್ಟದಲ್ಲಿಯೂ ಇದಕ್ಕಾಗಿ ಸಮಿತಿ ರಚಿಸಲಾಗಿದ್ದು, ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಸಹ ಸಮಿತಿ ರಚಿಸುವಂತೆ ಸೂಚಿಸಿದೆ. ಸ್ಥಳೀಯ ಸಂಸ್ಥೆಗಳ ಸಮಿತಿಗೆ ಪೌರಾಯುಕ್ತರು ಅಧ್ಯಕ್ಷರು. ತಾಲೂಕಾ ಆರೋಗ್ಯ ಅಧಿಕಾರಿ, ಪಶು ಅಧಿಕಾರಿ ಹಾಗೂ ಸ್ಥಳೀಯ ಸಂಸ್ಥೆಯ ಆರೋಗ್ಯ ಅಧಿಕಾರಿ ಸದಸ್ಯರಾಗಿದ್ದಾರೆ.
ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಈ ನಿಯಮ ಜಾರಿಯಲ್ಲಿದೆ. ಆದರೆ, ಬಹುತೇಕ ಅಧಿಕಾರಿ-ಸಿಬ್ಬಂದಿಗೆ ಈ ಬಗ್ಗೆ ಮಾಹಿತಿಯಿಲ್ಲ. ಅದಕ್ಕಿಂತ ಮುಖ್ಯವಾಗಿ ಕೆಲ ಸ್ಥಳೀಯ ಸಂಸ್ಥೆಗಳಲ್ಲಿ ನಾಯಿಗಳ ನಿಯಂತ್ರಣಕ್ಕೂ ಹಣವಿಲ್ಲ. ಕಚ್ಚಿದರೆ ಪರಿಹಾರ ನೀಡಲು ಅಧಿಕಾರಿಗಳಿಗೆ ಆಸಕ್ತಿಯಿಲ್ಲ. ಹೀಗಾಗಿ ಬೀದಿ ನಾಯಿಗಳ ನಿಯಂತ್ರಣದ ಬಗ್ಗೆಯೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.
ಬೀದಿ ನಾಯಿ ದಾಳಿಗೆ ಒಳಗಾದವರಿಗೆ ಪರಿಹಾರ ನೀಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನ ನಡೆಸಿಲ್ಲ. ಕೆಲವಡೆ ಬೀದಿ ನಾಯಿಗಳ ಸಂತಾನಹರಣ ನೆಪದಲ್ಲಿ ಲಕ್ಷಾಂತರ ರೂ ವೆಚ್ಚವಾಗುತ್ತಿರುವುದು ಕಡಿಮೆಯಾಗಿಲ್ಲ. ಒಬ್ಬ ವ್ಯಕ್ತಿ ಎಷ್ಟು ಬಾರಿ ನಾಯಿ ಕಚ್ಚಿಸಿಕೊಂಡು ಪರಿಹಾರ ಪಡೆಯಬಹುದು? ಎಂಬುವುದರ ಬಗ್ಗೆ ಸ್ಪಷ್ಠತೆ ಇಲ್ಲ.
ಇದನ್ನೂ ಓದಿ: ಬೇರೆಯವರ ದನ ತೋಟಕ್ಕೆ ನುಗ್ಗಿದರೆ ಏನು ಮಾಡಬೇಕು?
ಇಂಥ ಪ್ರಕರಣಗಳಲ್ಲಿ ನೀವು ಸಂತ್ರಸ್ಥರಾಗಿದ್ದರೆ ಕೂಡಲೇ ನಿಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗೆ ಅರ್ಜಿ ಸಲ್ಲಿಸಿ. ಈ ಮಾಹಿತಿ ಶೇರ್ ಮಾಡಿ.. ಅಗತ್ಯ ಇದ್ದವರಿಗೆ ನೆರವಾಗಿ!