ಆಸ್ತಿ ಕಲಹದಲ್ಲಿ ಸಹೋದರನನ್ನು ಕೊಂದ ಮೂವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಹೊನ್ನಾವರದ ವಿನಾಯಕ ಹೊನ್ನಪ್ಪ ನಾಯ್ಕ, ಚಿದಂಬರ ಹೊನ್ನಪ್ಪ ನಾಯ್ಕ ಹಾಗೂ ಮಂಜುನಾಥ ನಾಯ್ಕ ಅವರಿಗೆ ಜೈಲು ಶಿಕ್ಷೆ ಖಚಿತವಾಗಿದೆ.
ವಿನಾಯಕ ನಾಯ್ಕ, ಹಾಗೂ ಚಿದಂಬರ ನಾಯ್ಕ ಅವರು ಜಮೀನಿನ ಪಾಲಿನ ಹಂಚಿಕೆಯ ವಿಷಯದಲ್ಲಿ ಸಹೋದರ ಹನುಮಂತ ನಾಯ್ಕ ಜೊತೆ ವೈಮನಸ್ಸು ಹೊಂದಿದ್ದರು. ಇದೇ ಕಾರಣದಿಂದ ಹನುಮಂತ ನಾಯ್ಕ ತೊಟ್ಟಿಲುಗುಂಡಿಯ ತಂದೆಯ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. 2022ರ ನ 5ರಂದು ಸಂಜೆ ಈ ಕೆಲಸಕ್ಕೆ ಬಂದಿದ್ದ ಮಂಜುನಾಥ ನಾಯ್ಕ ಸೇರಿ ಅಡಿಕೆ ತುಂಬಿದ ಚೀಲಗಳನ್ನು ವಾಹನದಲ್ಲಿ ತೆಗೆದುಕೊಂಡು ಮಾರಾಟ ಮಾಡಲು ಹೋಗುತ್ತಿದ್ದರು. ಇದನ್ನು ಹನುಮಂತ ನಾಯ್ಕ ತಡೆದಿದ್ದರು.
ಆಗ, ಆ ಮೂವರು ಹನುಮಂತ ನಾಯ್ಕರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈ ರಟ್ಟೆಗಳನ್ನು ಹಿಡಿದು ಎಳೆದಾಡಿ ರಾಡುಗಳಿಂದ ತಲೆಯ ಮೇಲೆ ಹೊಡೆದಿದ್ದರು. ಹನುಮಂತ ನಾಯ್ಕರ ಮಾವ ಮಾರುತಿ ನಾಯ್ಕ ಅವರ ಮೇಲೆಯೂ ದಾಳಿ ನಡೆಸಿದ್ದರು. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಸಿಪಿಐ ಶ್ರೀಧರ ಎಸ್ ಆರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ಮೂವರಿಗೂ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಹೊನ್ನಾವರ ಪೊಲೀಸ ಠಾಣೆಯ ಎಎಎಸ್ಐ ಜ್ಞಾನೇಶ್ವರ ಹರಿಕಂತ್ರ, ಡಿಸಿಆರ್ಬಿ ವಿಭಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಮಿತಾ ಪಾವಸ್ಥರ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.