ಉತ್ತರ ಕನ್ನಡ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕ ನೂರಾರು ಡಾಬಾಗಳಿವೆ. ಕೆಲವಡೆ ಹೆದ್ದಾರಿಯನ್ನೇ ಅತಿಕ್ರಮಿಸಿಕೊಂಡು ಡಾಬಾಗಳು ಕಾರ್ಯ ನಿರ್ವಹಿಸುತ್ತಿದ್ದು ಹಗಲು-ರಾತ್ರಿ ಎನ್ನದೇ ಇಲ್ಲಿ ಸರಾಯಿ ಮಾರಾಟ ನಡೆಯುತ್ತಿದೆ. ಹೆದ್ದಾರಿಯಲ್ಲಿನ ವಾಹನ ಅಪಘಾತಗಳಿಗೆ ಈ ಅಕ್ರಮ ಸರಾಯಿ ಮಾರಾಟ ಸಹ ಕಾರಣ!
ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ 45ಮೀ ದೂರದಲ್ಲಿ ಯಾವುದೇ ಕಟ್ಟಡ ನಿರ್ಮಿಸುವ ಹಾಗಿಲ್ಲ ಎಂಬುದು ಕಾನೂನು. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಕಾನೂನಿಗೆ ಬೆಲೆಯೇ ಇಲ್ಲ. ನಗರ ವ್ಯಾಪ್ತಿಯಲ್ಲಿ ವಾಣಿಜ್ಯ ಸಂರ್ಕೀಣಗಳು ಈ ನಿಯಮ ಉಲ್ಲಂಘಿಸಿವೆ. ಗ್ರಾಮೀಣ ಭಾಗದಲ್ಲಿ ಹೆದ್ದಾರಿ ಅಂಚಿನ ಡಾಬಾಗಳು ರಾತ್ರಿ ವೇಳೆ ರಸ್ತೆ ಮೇಲೆಯೇ ಖುರ್ಚಿಗಳನ್ನಿರಿಸಿ ವ್ಯಾಪಾರ ಮಾಡುತ್ತಿವೆ. ಲಾರಿ ಚಾಲಕರು, ಖಾಸಗಿ ವಾಹನ ಸವಾರರ ಜೊತೆ ಸರ್ಕಾರಿ ಸ್ವಾಮ್ಯದ ಕೆಎಸ್ಆರ್ಟಿಸಿ ಬಸ್ ಚಾಲಕ-ನಿರ್ವಾಹಕರು ಸಹ ಇಂಥ ಡಾಬಾಗಳ ಖಾಯಂ ಗಿರಾಕಿಗಳಾಗಿದ್ದಾರೆ.
ಹೆದ್ದಾರಿ ಹೊಂಡದ ಜೊತೆ ನಿದ್ರೆಯ ಮಂಪರು ಹಾಗೂ ಮದ್ಯದ ನಶೆ ಬೇರೆಯವರ ಜೀವ ತೆಗೆಯುತ್ತಿದೆ. ಕಾರವಾರದಿಂದ ಹೊನ್ನಾವರದ ಕಡೆಗಿನ ಡಾಬಾಗಳಲ್ಲಿ ಗೋವಾ ಸರಾಯಿ ಸಿಗುತ್ತಿದೆ. ಹುಬ್ಬಳ್ಳಿ – ಅಂಕೋಲಾ ಮಾರ್ಗದ ಹೆದ್ದಾರಿಗಳಲ್ಲಿ ರಾಜ್ಯದ ಸರಾಯಿಯನ್ನೆ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಮಾರಾಟ ಮಾಡಲಾಗುತ್ತಿದೆ. ಈ ಮದ್ಯ ಸೇವಿಸಿ ವಾಹನ ಚಲಾಯಿಸುವ ಚಾಲಕರು ನಿಯಂತ್ರಣ ಕಳೆದುಕೊಳ್ಳುತ್ತಾರೆ.
ಹಗಲು ರಾತ್ರಿ ಎನ್ನದೇ ಪೊಲೀಸರ ವಾಹನಗಳು ಹೆದ್ದಾರಿಯಲ್ಲಿ ತಿರುಗುತ್ತವೆ. ಹೆದ್ದಾರಿ ಸಂಚಾರಕ್ಕಾಗಿಯೇ ವಿಶೇಷ ವಾಹನಗಳು ಇವೆ. ಆದರೆ, ಹೆದ್ದಾರಿ ಅಂಚಿನ ಪ್ರದೇಶ ಅತಿಕ್ರಮಣ ಹಾಗೂ ಅಲ್ಲಿ ಮಾರಾಟ ಮಾಡುವ ಅಕ್ರಮ ಮದ್ಯದ ಬಗ್ಗೆ ಆ ಪೊಲೀಸರು ಜಾಸ್ತಿ ತಲೆಕೆಡಿಸಿಕೊಂಡಿಲ್ಲ. ಪೊಲೀಸ್ ಗಸ್ತುವಾಹನದ ಮುಂದೆಯೇ ಮದ್ಯ ಮಾರಾಟ ನಡೆದರು ಅದನ್ನು ಪ್ರಶ್ನಿಸುತ್ತಿಲ್ಲ. ಕಾರಣ ಕೆಲವಡೆ ಈ ಬಗೆಯ ಡಾಬಾ ನಡೆಸುವವರು ಪೊಲೀಸರಿಗಿಂತಲೂ ಪ್ರಭಾವಿಗಳಾಗಿದ್ದಾರೆ ಎಂಬುದು ಸುಳ್ಳಲ್ಲ. ಹೀಗಾಗಿ ಅಲ್ಲಲ್ಲಿ ಸಣ್ಣ-ಪುಟ್ಟ ದಾಳಿಯಾದರೂ ಅದು ಸುದ್ದಿಯಾಗುವುದಿಲ್ಲ. ದಾಳಿ ನಂತರವೂ ಅಲ್ಲಿ ಅಕ್ರಮ ಚಟುವಟಿಕೆ ನಡೆಯುವುದು ನಿಲ್ಲುವುದಿಲ್ಲ!
ಇದೀಗ ಬಂದ ಸುದ್ದಿ | ಪಾರ್ವತಿ ಹೊಟೇಲಿನಲ್ಲಿ ನಶೆಯ ತೀರ್ಥ: ಡಬ್ಬಾ ಡಾಬಾ ಮೇಲೆ ಪೊಲೀಸರ ದಾಳಿ!
ಕೊಡ್ಲಗದ್ದೆ ಬಳಿಯ ಪಾರ್ವತಿ ಡಾಬಾದ ಮೇಲೆ ಯಲ್ಲಾಪುರ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿ ದಾಸ್ತಾನು ಮಾಡಿದ್ದ ಬಗೆ ಬಗೆಯ ಮದ್ಯಗಳು ಸಿಕ್ಕಿವೆ.
ಕೇರಳದ ಸತೀಶಕುಮಾರ ಮಣಪಟ್ಟಿ ಎಂಬಾತ ಕೊಡ್ಲಗದ್ದೆಯಲ್ಲಿ ಪಾರ್ವತಿ ಎಂಬ ಹೊಟೇಲ್ ನಡೆಸುತ್ತಿದ್ದು, ಅಲ್ಲಿ ರಾಜಾರೋಷವಾಗಿ ಸರಾಯಿ ವ್ಯಾಪಾರ ಮಾಡುತ್ತಿದ್ದರು. ಫೆ 12ರ ನಸುಕಿನ 4 ಗಂಟೆಗೆ ಯಲ್ಲಾಪುರ ಪಿಎಸ್ಐ ಸಿದ್ದಪ್ಪ ಗುಡಿ ಆ ಹೊಟೇಲ್ ಮೇಲೆ ದಾಳಿ ಮಾಡಿದರು. ಆಗ, ಅಲ್ಲಿ 7 ಬಗೆಯ ಮದ್ಯದ ಪೌಚು ಹಾಗೂ ಬಾಟಲಿಗಳು ಕಾಣಿಸಿದವು.
ಈ ಮದ್ಯ ಮಾರಾಟಕ್ಕೆ ಪಡೆದ ಅನುಮತಿ ಪತ್ರ ತೋರಿಸುವಂತೆ ಪೊಲೀಸರು ಕೇಳಿದರು. ಆಗ, ಸತೀಶಕುಮಾರ ಮಣಪಟ್ಟಿ ಅನುಪತಿ ಇಲ್ಲದಿರುವ ಬಗ್ಗೆ ಒಪ್ಪಿಕೊಂಡರು. ಒಟ್ಟು 34320ರೂ ಮೌಲ್ಯದ ಸರಾಯಿಯನ್ನು ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿದರು.