ಕಟ್ಟಡ ಪರವಾನಿಗೆ ವಿಷಯವಾಗಿ ಕೆಲಸ ಮಾಡಿಕೊಡಲು 10 ಸಾವಿರ ರೂ ಲಂಚ ಪಡೆಯುತ್ತಿದ್ದ ಕಾರವಾರ ನಗರಾಭಿವೃದ್ಧಿ ಕೋಶದ ಯೋಜನಾ ಸದಸ್ಯರೊಬ್ಬರು ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಕಾರವಾರ ಶಿರವಾಡದ ಪ್ರಸನ್ನ ನಾಯ್ಕ ಎಂಬಾತರು ಮನೆ ನಿರ್ಮಾಣದ ಚಿಂತನೆಯಲ್ಲಿದ್ದರು. ನಗರಾಭಿವೃದ್ಧಿ ಕೋಶದಿಂದ ಅವರಿಗೆ ಕೆಲ ಕೆಲಸ ಆಗಬೇಕಿತ್ತು. ಈ ಕೆಲಸಕ್ಕಾಗಿ ಅವರು ಸಾಕಷ್ಟು ಅಲೆದಾಟ ಮಾಡಿದ್ದರು. ಕೆಲಸ ಮಾಡಿಕೊಡಲು ನಗರ ಯೋಜಕ ಸದಸ್ಯ ಶಿವಾನಂದ ತಾಮ್ರೆಣ್ಣನವರ್ ಕಾಸು ಬೇಡಿದ್ದರು.
ಜನವರಿ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಅನುಮತಿ ಸಿಕ್ಕಿರಲಿಲ್ಲ. ಅನುಮತಿ ಕೇಳಿದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆ ಪ್ರಸನ್ನ ನಾಯ್ಕ ದೂರು ಸಲ್ಲಿಸಿದ್ದು, ಅದರ ಪ್ರಕಾರ ಕಾರ್ಯಾಚರಣೆ ನಡೆಯಿತು.
ಶುಕ್ರವಾರ ಸಂಜೆ 10 ಸಾವಿರ ರೂ ಹಣ ಪಡೆಯುವ ವೇಳೆ ಶಿವಾನಂದ ತಾಮ್ರೆಣ್ಣನವರ್ ಸಿಕ್ಕಿ ಬಿದ್ದರು. ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ನೇತ್ರತ್ವದಲ್ಲಿ ಈ ದಾಳಿ ನಡೆಯಿತು. ಸಿಕ್ಕಿ ಬಿದ್ದ ಭ್ರಷ್ಟನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು, ಜೈಲಿಗೆ ಕಳುಹಿಸಿದರು.