ಯಲ್ಲಾಪುರ: ಎಲ್ಲವೂ ಅಂದುಕೊ0ಡ0ತೆ ನಡೆದರೆ ತಾಲೂಕಿನಲ್ಲಿ ಇನ್ನೊಂದು ಪೆಟ್ರೋಲ್ ಬಂಕ್ ಹಾಗೂ ಗ್ಯಾಸ್ ಎಜನ್ಸಿ ಶುರುವಾಗಲಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯಲ್ಲಾಪುರ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘ ಈ ಸಾಹಸಕ್ಕೆ ಮುಂದಾಗಿದೆ. ಪೆಟ್ರೋಲ್ ಬಂಕ್ ಹಾಗೂ ಗ್ಯಾಸ್ ಎಜನ್ಸಿಗಾಗಿ ಮಂಜೂರಾತಿ ದೊರೆತಿದ್ದು, ಯೋಗ್ಯ ಸ್ಥಳಾವಕಾಶಕ್ಕಾಗಿ ಹುಡುಕಾಟ ನಡೆದಿದೆ.
74 ವಸಂತಗಳನ್ನು ಪೂರೈಸಿದ LSMP ಸೊಸೈಟಿ ಈ 75ನೇ ವರ್ಷಕ್ಕೆ ಹೊಸ ಕಟ್ಟಡ ನಿರ್ಮಾಣ ಸೇರಿ ಹಲವು ಚಟುವಟಿಕೆಗಳನ್ನು ಆಯೋಜಿಸಿದೆ. ಅದಕ್ಕೆ ಪೂರಕವಾಗಿ ಸಂಘ ಸಾಧನೆಯನ್ನು ಮಾಡುತ್ತಿದ್ದು, ಈ ವರ್ಷ ಎಲ್ಲಾ ಖರ್ಚುಗಳನ್ನು ಕಳೆದು 44.86 ಲಕ್ಷ ರೂ ಲಾಭಗಳಿಸಿದೆ. ಸಾಕಷ್ಟು ಸ್ಪರ್ಧೆಗಳ ನಡುವೆಯೂ 600ಕ್ಕೂ ಅಧಿಕ ಹೊಸಬರು ಸಂಘದ ಸದಸ್ಯತ್ವ ಪಡೆದಿದ್ದಾರೆ. ಕಳೆದ ವರ್ಷ 24 ಸದಸ್ಯರು ಮರಣಹೊಂದಿದ್ದು, ಅವರ ಅಂತ್ಯ ಸಂಸ್ಕಾರಕ್ಕಾಗಿ ಎಲ್ ಎಸ್ ಎಂ ಪಿ ಸೊಸೈಟಿ ಆರ್ಥಿಕ ಸಹಾಯ ಮಾಡಿದೆ.
ಇದರೊಂದಿಗೆ `ಈ ಬಾರಿ ಸದಸ್ಯರಿಗೆ ಶೇ 7ರ ಡಿವಿಡೆಂಟ್ ನೀಡಲು ಸಂಘ ನಿರ್ಧರಿಸಿದೆ’ ಎಂದು ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಸುದ್ದಿಗಾರರಿಗೆ ತಿಳಿಸಿದರು. `ಸೆ 23ರ ಮಧ್ಯಾಹ್ನ 3.30ಕ್ಕೆ ಹುಲ್ಲೋರಮನೆಯ ಗಜಾನನ ಮಾರುತಿ ದೇವಸ್ಥಾನ ಸಭಾಭವನದಲ್ಲಿ ಸಂಘದ ವಾರ್ಷಿಕ ಸಭೆ ನಡೆಯಲಿದೆ’ ಎಂದವರು ಹೇಳಿದರು.. ಪ್ರಮುಖರಾದ ತಿಮ್ಮಣ್ಣ ಹೆಗಡೆ, ಅಪ್ಪು ಆಚಾರಿ, ರಾಮಕೃಷ್ಣ ಭಟ್ಟ, ಸುಬ್ರಾಯ ಭಟ್ಟ, ರಾಘವೇಂದ್ರ ಭಟ್ಟ, ಮುಖ್ಯಾಧಿಕಾರಿ ಎಂ ಎಸ್ ಹೆಗಡೆ ಇತರರು ಇದ್ದರು.