ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ. ಗಾಯಗೊಂಡ ಮೂವರು ಮಕ್ಕಳು ಮುಂಡಗೋಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಭಾನುವಾರ ಮುಂಡಗೋಡು ಪಟ್ಟಣದ ಕಿಲ್ಲೆ ಓಣಿಯ ಸಮೀರ ನಿಗೋಣಿ ಅವರ 6 ವರ್ಷದ ಮಗ ಶಾದಾಬ, ಲಮಾಣಿ ತಾಂಡಾದ 4 ವರ್ಷದ ಅನನ್ಯ ಲಮಾಣಿ ಹಾಗೂ ಕಿಲ್ಲೆ ಓಣಿಯ ಮತ್ತೊಬ್ಬ ಬಾಲಕ ಆಟವಾಡುತ್ತಿದ್ದರು. ಈ ವೇಳೆ ಅಲ್ಲಿ ಆಗಮಿಸಿದ ಹುಚ್ಚು ನಾಯಿ ಆ ಮೂವರು ಮಕ್ಕಳ ಮೇಲೆ ಏಕಾಏಕಿ ದಾಳಿ ನಡೆಸಿದೆ. ನಾಯಿ ಕಚ್ಚಿದ್ದರಿಂದ ಮಕ್ಕಳು ಗಾಯಗೊಂಡು ಅಲ್ಲಿಯೇ ಬಿದ್ದು ಹೊರಳಾಟ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ಮಕ್ಕಳನ್ನು ರಕ್ಷಿಸಿದರು.
ನಾಯಿಗೆ ಹುಚ್ಚು ಹಿಡಿದ ಕಾರಣ ಜನ ಅದನ್ನು ಓಡಿಸುವ ಪ್ರಯತ್ನ ನಡೆಸಿದರು ಪ್ರಯೋಜನವಾಗಿಲ್ಲ. ಹೀಗಾಗಿ ಕೆಲ ಕಾಲ ಸ್ಥಳದಲ್ಲಿ ಆತಂಕ ಸೃಷ್ಠಿಯಾಗಿತ್ತು. ನಂತರ ಆ ನಾಯಿ ಅಲ್ಲಿಂದ ತೆರಳಿದ್ದು, ಜನ ನಿರಾಳರಾದರು ನಾಯಿ ಕಚ್ಚಿದ ಪರಿಣಾಮ ಶಾದಾಬ ನಿಗೋಣಿ ಹಾಗೂ ಅನನ್ಯ ಲಮಾಣಿ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಗಾಯವಾಗಿದೆ. ಹೀಗಾಗಿ ಅವರಿಬ್ಬರಿಗೂ ಪ್ರಾಥಮಿಕ ಚಿಕಿತ್ಸೆ ನಂತರ ಹುಬ್ಬಳ್ಳಿಗೆ ಕರೆದೊಯ್ದು ಅಲ್ಲಿನ ಕಿಮ್ಸ್’ಗೆ ದಾಖಲಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಗಾಯಗೊಂಡ ಬಾಲಕನಿಗೆ ಮುಂಡಗೋಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಮುಂಡಗೋಡು ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲಿಯೂ ಹುಚ್ಚುನಾಯಿ, ಕಜ್ಜಿನಾಯಿಗಳು ಆಗಾಗ ಕಾಣಿಸಿಕೊಳ್ಳುತ್ತಿವೆ. ಪಟ್ಟಣ ಪಂಚಾಯತಿಯವರು ನಾಯಿಗಳನ್ನು ನಿಯಂತ್ರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.