ಯಲ್ಲಾಪುರ ತಾಲೂಕಿನ 90 ವರ್ಷ ಲಕ್ಷ್ಮೀ ಅಜ್ಜಿ ಇದೀಗ ವಲ್ಡು ಫೇಮಸ್ಸು!
ಕೆರೆಹೊಸಳ್ಳಿ ಮೂಲದ ಈ ಅಜ್ಜಿ ಪ್ರಸ್ತುತ ಕಂಚಿನಳ್ಳಿಯಲ್ಲಿ ವಾಸವಾಗಿದ್ದಾರೆ. ಕಿವಿ ಸರಿಯಾಗಿ ಕೇಳುವುದಿಲ್ಲ ಎಂಬುದನ್ನು ಹೊರತುಪಡಿಸಿ ದೈಹಿಕ ಹಾಗೂ ಮಾನಸಿಕವಾಗಿ ಅವರಿಗೆ ಇನ್ನೂ 20ರ ಪ್ರಾಯ. ಜಾಸ್ತಿ ನೀರು ಕುಡಿಯುವುದು ಹಾಗೂ ರಾಗಿ ಗಂಜಿಯೇ ಆರೋಗ್ಯದ ಗುಟ್ಟು ಎಂದು ಅವರು ಹೇಳಿಕೊಂಡಿದ್ದಾರೆ!
ಕಳೆದ ವಾರ ಸತ್ಯ ನಾರಾಯಣ ಕಥೆಯ ಪ್ರಸಾದ ಕೊಡಲು ಆಹಾರ ಮೇಳಕ್ಕೆ ತೆರಳಿ ಅವರು ಆಹಾರ ಮೇಳದ ಮೊದಲ ಬಹುಮಾನ ಪಡೆದಿದ್ದರು. ಅದಕ್ಕೂ ಮೊದಲು ಹೆಣ್ಣು ನೋಡುವ ಶಾಸ್ತ್ರ ಮಾಡಿಸಿ ಜನರನ್ನು ನಗೆ ಕಡಲಿನಲ್ಲಿ ತೇಲಿಸಿದ್ದರು. ಸೂರಜ್ ಹಾಗೂ ಲಕ್ಷ್ಮೀ ಅಜ್ಜಿಯ ಪಾತ್ರವನ್ನು ಎಲ್ಲರೂ ನೋಡಿರುತ್ತೀರಿ. ಅವರ ವಿಡಿಯೋ ನೋಡಿ ನಕ್ಕು ಮನಸ್ಸು ಹಗುರ ಮಾಡಿಕೊಂಡಿರುತ್ತೀರಿ. ಈ ಎಲ್ಲಾ ಪಾತ್ರ ನಿಭಾಯಿಸುವದರ ಹಿಂದೆ ಅಜ್ಜಿಯ ಪ್ರೀತಿಯ ಮೊಮ್ಮಗ ಸೂರಜ್ ಶ್ರಮ ದೊಡ್ಡದು. ಸೂರಜ್ ಅವರು ಸಹ ವಿವಿಧ ಸಿನಿಮಾಗಳಲ್ಲಿ ಮಿಂಚಿದ್ದು, ಜನರನ್ನು ನಗಿಸುವುದನ್ನೇ ಮುಖ್ಯ ಕಾಯಕವನ್ನಾಗಿಸಿಕೊಂಡಿದ್ದಾರೆ. ಈ ಅಜ್ಜಿ ನಿಜವಾಗಿಯೂ ಸೂರಜ್ ಅವರ ಅಜ್ಜಿ ಮಾತ್ರವಲ್ಲ. ಸೂರಜ್ ಅವರ ಅಮ್ಮನ ಅಮ್ಮನ ಅಮ್ಮ!
ಹುಬ್ಬಳ್ಳಿ-ಮಂಚಿಕೇರಿ ಹಾಗೂ ಬೆಂಗಳೂರು ತಿರುಗಾಟ ನಡೆಸಿ ಸ್ನೇಹಿತರ ಜೊತೆ ಸೇರಿ ಅವರು ನವಿರಾದ ಹಾಸ್ಯ ವಿಡಿಯೋ ಮಾಡುತ್ತಾರೆ. ಡಬ್ಬಿಂಗ್, ಕ್ಯಾಮರಾ, ಸಂಭಾಷಣೆ, ವಿಡಿಯೋ ಎಡಿಟಿಂಗ್ ಎಲ್ಲವನ್ನು ಸೂರಜ್ ಒಬ್ಬರೇ ನಿಭಾಯಿಸುತ್ತಾರೆ. ಸೂರಜ್ ಅವರು ಊರಿನಲ್ಲಿದ್ದಾಗ ತಮ್ಮ ಮುತ್ತಜ್ಜಿಯ ಜೊತೆ ಕಾಲ ಕಳೆಯುತ್ತಾರೆ. ಆಗ ಹುಟ್ಟಿಕೊಳ್ಳುವ ಹಾಸ್ಯ ಸನ್ನಿವೇಶಗಳ ಆಧಾರದಲ್ಲಿ ವಿಡಿಯೋ ಮಾಡಿ ಅದನ್ನು ತಮ್ಮ ಯೂಟೂಬ್ ಚಾನಲ್’ನಲ್ಲಿ ಹರಿಬಿಡುತ್ತಾರೆ.
ಡಿಪ್ಲೋಮಾ ಓದಿರುವ ಸೂರಜ್ ಅವರಿಗೆ ಒಳ್ಳೆಯ ಉದ್ಯೋಗ ಅವಕಾಶ ಬಂದಿತ್ತು. ಆದರೆ, ಬೇರೆಯವರ ಕೈ ಕೆಳಗೆ ಉದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳಲು ಅವರಿಗೆ ಇಷ್ಟವಿರಲಿಲ್ಲ. ಮನೆಯಲ್ಲಿ ಹೇಳಿಕೊಳ್ಳುವಂಥ ಸಿರಿತನ ಇಲ್ಲದಿದ್ದರೂ ಅವರೊಳಗಿನ ಪ್ರತಿಭೆಯಿಂದ ಅವರು ಇದೀಗ ಜೀವನ ನಡೆಸುವಷ್ಟರ ಮಟ್ಟಿಗೆ ಸ್ಥಿತಿವಂತರಾಗಿದ್ದಾರೆ. ಸೂರಜ್ ಅವರು ಹಾಸ್ಯ ವಿಡಿಯೋ ಪ್ರಪಂಚಕ್ಕೆ ಕಾಲಿರಿಸಿ ಎರಡು ವರ್ಷ ಕಳೆದಿದೆ. ಅದಾಗಲೇ ಅವರು ಲಕ್ಷಕ್ಕೂ ಅಧಿಕ ಜನರನ್ನು ನಗಿಸಿದ್ದಾರೆ.
ಎಂಥ ಬೇಸರದಲ್ಲಿದ್ದರೂ ಸೂರಜ್ ಅವರ ವಿಡಿಯೋ ನೋಡಿದರೆ ನಗಲೇಬೇಕು. ಮಂಚಿಕೇರಿಯ ಸೂರಜ್ ಹಾಗೂ ಅವರ ಅಜ್ಜಿ ಒಟ್ಟಿಗೆ ನಿಭಾಯಿಸುವ ಹಾಸ್ಯದ ವಿಡಿಯೋಗಳನ್ನು ನೋಡಿ ನಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟೇ ಪ್ರಮಾಣದ ಜನ ಮೆಚ್ಚುಗೆಗೆ ಸಹ ಅವರು ಪಾತ್ರರಾಗಿದ್ದಾರೆ. ಈವರೆಗೂ ಅವರು ಜನರ ಮೇಲೆ ದುಷ್ಪರಿಣಾಮ ಬೀರುವ ಜಾಹೀರಾತುಗಳ ಪ್ರಚಾರ ನಡೆಸಿಲ್ಲ. `ಗಿಡ ಮರಗಳನ್ನು ಬೆಳೆಸಿ. ನೀವು ಒಳ್ಳೆಯರಾಗಿರಿ.. ಬೇರೆಯವರಿಗೂ ಒಳ್ಳೆಯದು ಮಾಡೋಣ’ ಎಂಬುದು ಅಜ್ಜಿಯ ಹಿತನುಡಿ.
ಸೂರಜ್ ಅವರ ಎಲ್ಲಾ ವಿಡಿಯೋ ನೋಡಲು ಯೂಟೂಬ್ ಲಿಂಕ್ ಬಳಸಿ: https://youtube.com/@suraj._.dramajunior?si=D91FcpW-pVW-gNki