ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದರು ವಿರೋಧಿ ಹೋರಾಟ ಜೋರಾಗಿದೆ. ಅಂಕೋಲಾದಲ್ಲಿ ಬಂದರು ನಿರ್ಮಾಣ ಕಾಮಗಾರಿಗೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೆ ಹೊನ್ನಾವರದಲ್ಲಿಯೂ ಪ್ರತಿಭಟನೆಯ ಕಾವು ಜೋರಾಗಿದೆ. ಆದರೆ, ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಮಾತ್ರ ಮೌನವಾಗಿದ್ದಾರೆ.
`ಚುನಾವಣೆ ದೇವಸ್ಥಾನಕ್ಕೆ ಬಂದು ಮತ ಕೇಳಿದ ಮಂಕಾಳು ವೈದ್ಯ ಈಗ ಎಲ್ಲಿ ಹೋದ?’ ಎನ್ನುವ ಬಗ್ಗೆ ಪುಠಾಣಿ ಅಪೇಕ್ಷಾ ಮಾತನಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಮೀನುಗಾರಿಕಾ ಸಚಿವ ಮಂಕಾಳು ವೈದ್ಯರನ್ನು ಅಪೇಕ್ಷಾ ಅವರು ಏಕವಚನದಲ್ಲಿ ಪ್ರಶ್ನಿಸಿದ್ದು, ಅವರ ನ್ಯಾಯಯುತ ಪ್ರಶ್ನೆಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಉತ್ತರ ಸಿಗುವವರೆಗೂ ಆ ವಿಡಿಯೋ ವೈರಲ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಮಂಗಳವಾರ ಹೊನ್ನಾವರದ ಕಾಸರಕೋಡಿನಲ್ಲಿ ಬಂದರು ನಿರ್ಮಾಣ ಸರ್ವೇ ಕಾರ್ಯ ವಿರೋಧಿಸಿ ಸಾವಿರಾರು ಮೀನುಗಾರರು ಪ್ರತಿಭಟನೆ ನಡೆಸಿದರು. ಈ ವೇಳೆ ಮೀನುಗಾರರನ್ನು ಬಂಧಿಸಲಾಗಿದ್ದು, ಈ ಬಂಧನ ವಿರೋಧಿಸಿ ಅಪೇಕ್ಷಾ ಮಾತನಾಡಿದ್ದಾರೆ. ಮೀನುಗಾರರನ್ನು ಬಿಡುಗಡೆ ಮಾಡದೇ ಇದ್ದರೆ ಸಮುದ್ರಕ್ಕೆ ಹಾರಿ ಸಾವನಪ್ಪುವುದಾಗಿಯೂ ಅಪೇಕ್ಷಾ ಹೇಳಿದ್ದಾರೆ. ಇದರೊಂದಿಗೆ `ನ್ಯಾಯ ಕೊಡಲು ಸಾಧ್ಯವಾಗದೇ ಇದ್ದರೆ ಮೀನುಗಾರರೆಲ್ಲರಿಗೂ ದಯಾ ಮರಣ ಕೊಡಿ’ ಎಂದು ಅಪೇಕ್ಷಾ ಹೇಳಿಕೊಂಡು ಕಣ್ಣೀರಾಗಿದ್ದಾರೆ.
ಮುನ್ನಚ್ಚರಿಕಾ ಕ್ರಮವಾಗಿ ಈ ದಿನ ಕಡಲ ಭಾಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅದಾಗಿಯೂ ಮೀನುಗಾರರು ಸಮುದ್ರಕ್ಕೆ ಇಳಿದು ಪ್ರತಿಭಟನೆ ನಡೆಸಿದರು. ಹೀಗಾಗಿ 50ಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ಪಡೆದರು. ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಇನ್ನಷ್ಟು ಜನ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿದರು.
ಪುಠಾಣಿ ಅಪೇಕ್ಷಾ ಅವರ ವಿಡಿಯೋ ನೋಡಿ.. ಸುದ್ದಿ ಮುಂದೆ ಓದಿ..
ಇನ್ನೂ, ಹೊನ್ನಾವರದಲ್ಲಿ ಪೋರ್ಟ ಪ್ರೆ ಲಿ ಕಂಪನಿ 600 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣಕ್ಕೆ ಆಸಕ್ತಿವಹಿಸಿದೆ. ಕಳೆದ ಮೂರು ವರ್ಷಗಳಿಂದಲೂ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಂಗಳವಾರ ಬಂದರು ಕಾರ್ಯಕ್ಕೆ ಸರ್ವೇ ನಡೆದಿದ್ದು, ಈ ವೇಳೆಯೂ ಮೀನುಗಾರರು ಪ್ರತಿಭಟಿಸಿದರು. ಪ್ರತಿಭಟನೆ ವೇಳೆ ನಾಲ್ವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಂದರು ನಿರ್ಮಾಣದ ನಂತರ ಮೀನುಗಾರಿಕೆಗೆ ಸಮಸ್ಯೆಯಾಗಲಿದೆ ಎಂದು ಪ್ರತಿಭಟನಾಕಾರರು ವಿವರಿಸಿದರು.