ಕುಮಟಾ: ಮಾದನಗೇರಿಯ ರೈಲ್ವೆ ಸೇತುವೆ ಬಳಿ ಅಂಗಡಿ ನಡೆಸುವ ಸೂರ್ಯಕಾಂತ ಹರಿಕಂತ್ರ ಹಾಗೂ ಹಿತ್ಲಮಕ್ಕಿ ಕ್ರಾಸಿನ ಬಳಿ ಹೊಟೇಲ್ ನಡೆಸುವ ಗೋವಿಂದ ನಾಯ್ಕ ಮಟ್ಕಾ ಆಡಿಸುತ್ತಾರೆ.
ಹಿರೇಗುತ್ತಿಯ ಸುರ್ಯಕಾಂತ ಹರಿಕಂತ್ರ ಮಾದನಗೇರಿ ರೈಲ್ವೆ ಸೇತುವೆ ಬಳಿ ಅಂಗಡಿ ನಡೆಸುತ್ತಿದ್ದಾರೆ. ಅಂಗಡಿಗೆ ಬರುವವರಿಗೆ ಜೂಜಾಟದ ಹುಚ್ಚು ಹಿಡಿಸಿ ಅವರಿಂದ ಹಣ ಸಂಗ್ರಹಿಸುತ್ತಾರೆ. ಗೂಡಂಗಡಿ ವ್ಯಾಪಾರ ಅವರ ಮೂಲ ಆದಾಯವಾದರೆ ಜೂಜಾಟದ ಕಾಸು ಅವರ ಉಪ ಆದಾಯ.
ಕುಮಟಾ ಸಸಿಹಿತ್ತಲ್’ನ ಗೋವಿಂದ ನಾಯ್ಕ ಅವರು ಹಿತ್ಲಮಕ್ಕಿ ಕ್ರಾಸಿನ ಬಳಿ ಹೊಟೇಲ್ ಉದ್ದಿಮೆಯಲ್ಲಿದ್ದಾರೆ. ಅವರಿಗೆ ಒಳ್ಳೆಯ ವ್ಯಾಪಾರವೂ ಇದೆ. ಅದಾಗಿಯೂ ಹೆಚ್ಚಿನ ಕಾಸು ಸಂಪಾದಿಸುವ ಆಸೆಗಾಗಿ ಅವರು ಜೂಜಾಟ ಆಡಿಸುತ್ತಾರೆ. ಹೊಟೇಲ್’ಗೆ ಬರುವ ಗ್ರಾಹಕರಿಗೆ ಅದೃಷ್ಟ ಆಟ ಆಡಿ, ಹಣ ಗೆಲ್ಲಿ ಎಂದು ಅವರು ಪುಸಲಾಯಿಸುತ್ತಾರೆ.
ಈ ಇಬ್ಬರ ಕಾನೂನುಬಾಹಿರ ಚಟುವಟಿಕೆ ಬಗ್ಗೆ ಅರಿತ ಗೋಕರ್ಣದ ಪೊಲೀಸ್ ನಿರೀಕ್ಷಕ ವಸಂತ ಆಚಾರ್ ಸೋಮವಾರ ಎರಡು ಮಳಿಗೆ ಮೇಲೆ ದಾಳಿ ಮಾಡಿದರು. ಈ ದಿನ ಸೂರ್ಯಕಾಂತ ಹರಿಕಂತ್ರ ಜೂಜಾಟದಿಂದ 1125ರೂಗಳಿಸಿದ್ದು ಅದನ್ನು ವಶಕ್ಕೆ ಪಡೆದರು. ಗೋವಿಂದ ನಾಯ್ಕ 1020ರೂ ಪಡೆದಿದ್ದು ಅದನ್ನು ಜಪ್ತು ಮಾಡಿದರು. ಜೊತೆಗೆ ಇಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ತಡೆ ಒಡ್ಡಿದರು.