ಮುಂಡಗೋಡ: ಕಾತೂರು ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಮೂವರ ಮೇಲೆ ದಾಳಿ ನಡೆಸಿದ ಪೊಲೀಸರು ಅವರ ಬಳಿಯಿದ್ದ ಹಣವನ್ನು ವಶಕ್ಕೆ ಪಡೆಯಲು ಹರಸಾಹಸ ನಡೆಸಿದರು. ಕೊನೆವರೆಗೂ ಜನರಿಂದ ಸಂಗ್ರಹಿಸಿದ ಹಣವನ್ನು ಕೊಡಲು ಓಸಿ ಆಡಿಸುವವರು ಒಪ್ಪಲಿಲ್ಲ. ಮೊದಲು ಚೀಟಿ ಹಾಗೂ ಬಾಲ್ಪೆನ್ ವಶಕ್ಕೆ ಪಡೆದ ಪೊಲೀಸರು ನಂತರ ಉಪಾಯವಾಗಿ ಅವರ ಬಳಿಯಿದ್ದ ಹಣವನ್ನು ಜಪ್ತು ಮಾಡಿದರು!
ಸೆ 9ರ ಸಂಜೆ ಕಾತೂರು ಬಸ್ ನಿಲ್ದಾಣದ ಬಳಿ ನಂದಿಪುರದ ಸಯ್ಯದ ಹರಬಿ, ಮುಸ್ತಾಕ ಮುಜಾವರ ಹಾಗೂ ಕಾತೂರಿನ ನೀಲಪ್ಪ ವರ್ದಿ ಓಸಿ ಆಟದಲ್ಲಿ ತೊಡಗಿದ್ದರು. ಸಾರ್ವಜನಿಕ ರಸ್ತೆ ಬಳಿ ನಿಂತು 1 ರೂಪಾಯಿಗೆ 80 ರೂ ಕೊಡುವುದಾಗಿ ನಂಬಿಸಿ ಜನರಿಂದ ಹಣ ಸಂಗ್ರಹಿಸಿದ್ದರು. ಒಟ್ಟು 1150ರೂ ಸಂಗ್ರಹವಾಗಿತ್ತು. ಆದರೆ, ಪೊಲೀಸರು ದಾಳಿ ನಡೆಸಿದಾಗ ಅವರು ಆ ಹಣವನ್ನು ಮಾತ್ರ ಕೊಡಲಿಲ್ಲ.
ಸಾಕಷ್ಟು ವಾಗ್ವಾದ ನಡೆಸಿದ ನಂತರವೂ `ಈ ಹಣವನ್ನು ನಾವೇ ಇಟ್ಟುಕೊಳ್ಳುತ್ತೇವೆ’ ಎಂದು ಮೂವರು ಹೇಳಿದರು. ಮೊದಲು ಪೆನ್ ಹಾಗೂ ಚೀಟಿಯನ್ನು ವಶಕ್ಕೆ ಪಡೆದ ಪೊಲೀಸರು ನಂತರ ಅವರ ಮನವೊಲೈಸಿ 1150ರೂ ಹಣವನ್ನು ವಸೂಲಿ ಮಾಡಿದರು. ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಈ ಎಲ್ಲಾ ಸಾಕ್ಷಿಗಳನ್ನು ಒದಗಿಸುವ ಸಿದ್ಧತೆ ನಡೆಸಿದ್ದಾರೆ.
ಸಿದ್ದಾಪುರದಲ್ಲಿಯೂ ದಾಳಿ:
ಮಂಗಳವಾರ ಬಸವಣ್ಣಗಲ್ಲಿ ಹತ್ತಿರ ಓಸಿ ಆಟ ಆಡಿಸುತ್ತಿದ್ದ ಹೊಸೂರಿನ ಪರಮೇಶ್ವರ ಬಾಡ್ಕರ್ ಎಂಬಾತನ ಮೇಲೆ ಪಿಎಸ್ಐ ಅನಿಲ ಬಿ ಎಂ ದಾಳಿ ನಡೆಸಿದರು. ಈ ವೇಳೆ 820ರೂ ಹಣ ಹಾಗೂ ಇನ್ನಿತರ ಪರಿಕ್ಕರಗಳು ಸಿಕ್ಕಿವೆ.