ಕಾರವಾರ: ಆಯುಷ್ ಆಸ್ಪತ್ರೆಯಲ್ಲಿನ ಔಷಧಿಗಳು ಅವಧಿಗೂ ಮುನ್ನ ಹಾಳಾಗುತ್ತಿವೆ. ಔಷಧಿಗಳ ಮೇಲೆ ಐದು ವರ್ಷದ ಅವಧಿಯಿದ್ದರೂ ಅವು ಒಂದು ವರ್ಷ ಸಹ ಬಾಳಿಕೆ ಬರುತ್ತಿಲ್ಲ. ಸರ್ಕಾರಿ ಹಣದಲ್ಲಿ ಖರೀದಿಸಿದ ಲಕ್ಷಾಂತರ ರೂ ಮೌಲ್ಯದ ಕಳಪೆ ಗುಣಮಟ್ಟದ ಔಷಧಿಗಳನ್ನು ಅಧಿಕಾರಿಗಳು ರಹಸ್ಯವಾಗಿ ಸುಟ್ಟು ನಾಶ ಮಾಡಿದ್ದಾರೆ. ಇದರೊಂದಿಗೆ ವೈದ್ಯಕೀಯ ತ್ಯಾಜ್ಯಕ್ಕೆ ಬೆಂಕಿಯಿಟ್ಟು ಪರಿಸರ ಮಾಲಿನ್ಯ ಮಾಡಿದ ಬಗ್ಗೆ ವೈದ್ಯರೊಬ್ಬರು ದಾಖಲೆಗಳ ಜೊತೆ ಸರ್ಕಾರಕ್ಕೆ ದೂರು ನೀಡಿದ್ದಾರೆ!
`ಅವಧಿ ಮೀರಿದ ಔಷಧಿ ನಾಶ ಮಾಡುವುದಕ್ಕೂ ಹಲವು ವಿಧಾನಗಳಿವೆ. ಆದರೆ, ಅವಧಿ ಪೂರ್ವ ಔಷಧಿಗಳನ್ನು ನಾಶ ಮಾಡುವಾಗ ಸಹ ಆ ವಿಧಾನಗಳನ್ನು ಅನುಸರಿಸಿಲ್ಲ’ ಎಂಬುದು ಇಲ್ಲಿನ ಮುಖ್ಯ ಆರೋಪ. `ಉತ್ತರ ಕನ್ನಡ ಜಿಲ್ಲಾ ಸರ್ಕಾರಿ ಆಯುರ್ವೇದ ಔಷಧ ವಿತರಣಾ ಕೇಂದ್ರದಲ್ಲಿ ದಾಸ್ತಾನಿದ್ದ ಔಷಧಿಗಳನ್ನು ಆಯುಷ್ ವೈದ್ಯಾಧಿಕಾರಿ ಡಾ ಲಲಿತಾ ಶೆಟ್ಟಿ ಅವರ ಸೂಚನೆ ಮೇರೆಗೆ ಸುಡಲಾಗಿದೆ’ ಎಂಬುದು ಸಿಎಸ್ಎಸ್ ತಜ್ಞ ವೈದ್ಯ ಡಾ ಸಂಗಮೇಶ ಪರಂಡಿ ಮೇಲಧಿಕಾರಿಗಳಿಗೆ ನೀಡಿದ ದೂರು.
`ತಾನು ರೋಗಿಗಳಿಗೆ ಬರೆದುಕೊಟ್ಟ ಔಷಧಿವನ್ನು ಸಿಬ್ಬಂದಿ ಅಗತ್ಯವಿರುವವರಿಗೆ ವಿತರಿಸಿಲ್ಲ. ಆ ಮಾತ್ರೆಗಳು ಖಾಲಿಯಾಗಿವೆ ಎಂದು ರೋಗಿಗೆ ಉತ್ತರಿಸಿದ್ದು, ತಪಾಸಣೆ ನಡೆಸಿದಾಗ ನಾನು ಬರೆದುಕೊಟ್ಟ ಔಷಧಿಗಳು ಅಲ್ಲಿಯೇ ಇದ್ದವು. ಪರಿಶೀಲಿಸಿದಾಗ ಆ ಎಲ್ಲಾ ಔಷಧಿ ಹಾಳಾಗಿದ್ದು, ಅದನ್ನು ಬೆಂಕಿಗೆ ಹಾಕಿ ನಾಶ ಮಾಡಲಾಗಿದೆ. ಕೆಲ ಅಧಿಕಾರಿಗಳು ಕಳಪೆ ಗುಣಮಟ್ಟದ ಔಷಧಿ ಖರೀದಿಸಿ ಲಕ್ಷಾಂತರ ರೂ ಸರ್ಕಾರಕ್ಕೆ ನಷ್ಟ ಮಾಡಿದಲ್ಲದೇ, ಅದನ್ನು ಬೆಂಕಿಗೆ ಹಾಕಿ ನಾಶ ಮಾಡುವ ಮೂಲಕ ಪರಿಸರಕ್ಕೂ ಹಾನಿ ಮಾಡಿದ್ದಾರೆ. ಜೊತೆಗೆ ರೋಗಿಗಳಿಗೂ ಅನ್ಯಾಯ ಮಾಡಿದ್ದಾರೆ’ ಎಂದು ಡಾ ಸಂಗಮೇಶ ಪರಂಡಿ ವಿವಿಧ ಹಂತದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
`ಈ ಪ್ರಕರಣ ಗಮನಕ್ಕೆ ಬಂದ ತಕ್ಷಣ ಅದನ್ನು ಡಾ ಲಲಿತಾ ಶೆಟ್ಟಿ ಅವರಿಗೆ ತಿಳಿಸಿದರೂ ಕ್ರಮ ಜರುಗಿಸಿಲ್ಲ. ಮೇಲಧಿಕಾರಿಗಳಿಗೆ ತಿಳಿಸಬೇಡಿ ಎಂದು ನರ್ಸ ನಿಶಾ ನಾಯ್ಕ ಹಾಗೂ ಫಾರ್ಮಾಸಿಸ್ಟ ಸುಧಾ ಮಂಡಾಸದ್ ಸಹ ತನ್ನನ್ನು ತಡೆದಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಕನ್ನಯ್ಯ ವಾರಿಕ್ ಹಾಗೂ ನಾಗೇಶ ಅರ್ಗೇಕರ್ ಈ ಔಷಧಿಗಳನ್ನು ಸುಟ್ಟಿದ್ದಾರೆ’ ಎಂದು ಅವರು ಫೋಟೋಗಳನ್ನು ಸಲ್ಲಿಸಿದ್ದಾರೆ.
`ವೈದ್ಯಕೀಯ ತ್ಯಾಜ್ಯಗಳನ್ನು ಸುಟ್ಟಿಲ್ಲ. ಆಸ್ಪತ್ರೆ ಆವರಣ, ವಾರ್ಡಗಳನ್ನು ಸ್ವಚ್ಛಗೊಳಿಸಿ ಇತರೆ ತ್ಯಾಜ್ಯಗಳನ್ನು ಸುಡಲಾಗಿದೆ. ವೈದ್ಯಕೀಯ ತ್ಯಾಜ್ಯಗಳನ್ನು ನಗರಸಭೆ ವಾಹನಕ್ಕೆ ನೀಡಲಾಗುತ್ತದೆ. ಅದಾಗಿಯೂ ದೂರಿನ ಹಿನ್ನಲೆ ಅಧೀನ ಸಿಬ್ಬಂದಿಗೆ ಪತ್ರ ನೀಡಿ, ಉತ್ತರ ಪಡೆಯುವ ಪ್ರಕ್ರಿಯೆ ನಡೆದಿದೆ’ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ ಲಲಿತಾ ಶೆಟ್ಟಿ ಪ್ರತಿಕ್ರಿಯಿಸಿದರು.