ಕಾರವಾರ: ಸರ್ಕಾರಿ ಆಸ್ಪತ್ರೆಯ ಔಷಧ ವಿತರಣಾ ಕೇಂದ್ರದಲ್ಲಿದ್ದ ಔಷಧಿ ಡಬ್ಬಿಗಳು ಕಣ್ಮರೆಯಾಗಿದ್ದು, ಆಸ್ಪತ್ರೆಯ ವೈದ್ಯರೊಬ್ಬರು ಅದನ್ನು ಅನಧಿಕೃತವಾಗಿ ಕೊಂಡೊಯ್ದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿನ ಔಷಧ ವಿತರಣಾ ಕೇಂದ್ರದಲ್ಲಿದ್ದ ದಾಸ್ತಾನು ಹಾಗೂ ರಿಜಿಸ್ಟರ್ ಪುಸ್ತಕದಲ್ಲಿದ್ದ ಔಷಧಿ ನಡುವೆ ವ್ಯತ್ಯಾಸ ಕಂಡು ಬಂದಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಡಿಸೆಂಬರ್ 10ರಂದು ಆಸ್ಪತ್ರೆಯ ವೈದ್ಯ ಡಾ ಸಂಗಮೇಶ ಪರಂಡಿ ಅನಧಿಕೃತವಾಗಿ ಔಷಧಿಗಳನ್ನು ಒಯ್ದಿರುವುದು ಪತ್ತೆಯಾಗಿತ್ತು. 25ರಷ್ಟು ಚೂರ್ಣದ ಡಬ್ಬಿಯನ್ನು ಅವರು ಒಯ್ದಿದ್ದರು. ಅವರು ಅದನ್ನು ಯಾವ ಉದ್ದೇಶಕ್ಕೆ ಒಯ್ದರು? ಯಾರಿಗೆ ವಿತರಿಸಿದರು? ಎಂದು ಮೇಲಧಿಕಾರಿಗಳು ಪ್ರಶ್ನಿಸಿದರೂ ಉತ್ತರಿಸಿರಲಿಲ್ಲ.
ಆಸ್ಪತ್ರೆಯ ಔಷಧ ನಾಪತ್ತೆಯಾಗಿರುವುದರಿಂದ ಔಷಧ ಸಂಗ್ರಹಣೆಯಲ್ಲಿ ತೊಂದರೆಯಾಗುವುದು, ರೋಗಿಗಳ ಅಗತ್ಯಕ್ಕೆ ತಕ್ಕ ಹಾಗೇ ಔಷಧ ನೀಡಲು ಆಗದಿರುವ ಬಗ್ಗೆ ಮೇಲಧಿಕಾರಿಗಳು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನಲೆ ಡಾ ಸಂಗಮೇಶ್ ಅವರಿಗೆ ಆಯುಷ್ ಇಲಾಖೆಯ ಆಯುಕ್ತರಿಂದ ನೋಟಿಸ್ ಜಾರಿಯಾಗಿದೆ.
ಇದನ್ನು ಓದಿ: ಆಯುಷ್ ಮಾತ್ರೆಗೆ ಇಲ್ಲ ಆಯಸ್ಸು!
ಆಯುಷ್ ಇಲಾಖೆ ಔಷಧಗಳು ಹಾಳಾಗಿರುವುದು ಹಾಗೂ ಅದನ್ನು ಸುಟ್ಟು ನಾಶ ಮಾಡಿದ ಬಗ್ಗೆ ಡಾ ಸಂಗಮೇಶ ಅವರು ಈ ಹಿಂದೆ ಸರ್ಕಾರಕ್ಕೆ ದೂರು ಸಲ್ಲಿಸಿದ್ದು, ಆ ಬಗ್ಗೆಯೂ ನೋಟಿಸ್ ಮೂಲಕ ಪ್ರಶ್ನಿಸಲಾಗಿದೆ. ಇದೇ ರೀತಿ ವರ್ತನೆ ಮುಂದುವರೆದರೆ ಸೇವೆಯಿಂದಲೇ ವಜಾ ಮಾಡುವ ಬಗ್ಗೆಯೂ ಆಯುಷ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಆಯುಷ್ ಇಲಾಖೆಯಲ್ಲಿನ ಔಷಧಿಗಳ ಬಗ್ಗೆ ಡಾ ಸಂಗಮೇಶ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಔಷಧಿಗಳನ್ನು ಅನಧಿಕರತವಾಗಿ ಸುಟ್ಟಿರುವ ಬಗ್ಗೆ ದೂರು ಸಲ್ಲಿಸಿದ್ದರು. ಇದಾದ ನಂತರ ಡಾ ಸಂಗಮೇಶ ಅವರ ಮೇಲೆ ರೋಗಿಯೊಬ್ಬರು ಹಲ್ಲೆ ನಡೆಸಿ ಅವರು ಆಸ್ಪತ್ರೆಗೆ ಸಹ ದಾಖಲಾಗಿದ್ದರು.