2014ರಲ್ಲಿ ಸುರಿದ ಮಳೆಗೆ ಹೊನ್ನಾವರದ ಶ್ರೀಧರ ನಾಯಕ ಅವರ ಬಟ್ಟೆ ಅಂಗಡಿಗೆ ಚೆರಂಡಿ ನೀರು ನುಗ್ಗಿದ್ದು, ಅವರು 50 ಸಾವಿರ ರೂ ಪರಿಹಾರ ಕೋರಿ ಪಟ್ಟಣ ಪಂಚಾಯತಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ಪಟ್ಟಣ ಪಂಚಾಯತ ಗಂಭೀರವಾಗಿ ಪರಿಗಣಿಸದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದು, ಇದೀಗ ಪಟ್ಟಣ ಪಂಚಾಯತ ಕಚೇರಿಯನ್ನು ಜಪ್ತು ಮಾಡುವಂತೆ ನ್ಯಾಯಾಲಯ ಆದೇಶಿಸಿದೆ!
ಬುಧವಾರ ಶ್ರೀಧರ ನಾಯಕ ಅವರ ಜೊತೆ ನ್ಯಾಯಾಲಯದ ಸಿಬ್ಬಂದಿ ಹೊನ್ನಾವರ ಪಟ್ಟಣ ಪಂಚಾಯತಗೆ ಆಗಮಿಸಿದ್ದು `ಎಲ್ಲರೂ ಕೆಲಸ ಮಾಡುವುದನ್ನು ನಿಲ್ಲಿಸಿ’ ಎಂದು ದೊಡ್ಡದಾಗಿ ಕೂಗಿದರು. ಪ್ರಶ್ನಿಸಿದಾಗ ಕಚೇರಿ ಜಪ್ತಿಯ ಆದೇಶ ಕಾಣಿಸಿದರು. ಇದರಿಂದ ಕಚೇರಿಯಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಕಂಗಾಲಾದರು. ತಕ್ಷಣ ಪ ಪಂ ಮುಖ್ಯಾಧಿಕಾರಿ ಯೇಸು ನ್ಯಾಯಾಲಯದ ಮೊರೆ ಹೋಗಿ ಈ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದರು.
ಮಳೆಗಾಲದ ಮುನ್ನ ಪಟ್ಟಣ ಪಂಚಾಯತ ಸರಿಯಾಗಿ ಚರಂಡಿ ಸ್ವಚ್ಛ ಮಾಡಿರಲಿಲ್ಲ. ಪರಿಣಾಮ ತೆಲಂಗ ಕಾಂಪ್ಲೆಕ್ಸಿನಲ್ಲಿರುವ ಶ್ರೀಧರ ನಾಯಕ ಅವರ ಬಟ್ಟೆ ಅಂಗಡಿಗೆ ಕೊಳಚೆ ನೀರು ನುಗ್ಗಿತ್ತು. ಬಟ್ಟೆ ಸೇರಿ ವಿವಿಧ ಸಾಮಗ್ರಿಗಳನ್ನು ಆ ನೀರು ಹಾಳು ಮಾಡಿತ್ತು. ಈ ಬಗ್ಗೆ ಶ್ರೀಧರ ನಾಯಕ ಅವರು ಹಲವು ಬಾರಿ ಪಟ್ಟಣ ಪಂಚಾಯತ ಕಚೇರಿಗೆ ಅಲೆದಾಡಿದ್ದರು. ತಮಗೆ ಪರಿಹಾರ ನೀಡಿ ಎಂದು ಅರ್ಜಿ ಹಿಡಿದು ಅಳಲು ತೋಡಿಕೊಂಡಿದ್ದರು. ಆದರೆ, ಅಧಿಕಾರಿಗಳು ಮಾತ್ರ ಅವರ ಮನವಿಗೆ ಕಿಂಚಿತ್ತು ಸ್ಪಂದಿಸರಲಿಲ್ಲ.
ಹೀಗಾಗಿ ಅವರು ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋದರು. ತಮಗಾದ ನಷ್ಟದ ಬಗ್ಗೆ ನ್ಯಾಯಾಧೀಶರಿಗೆ ಮನವರಿಕೆ ಮಾಡಿದ್ದರು. ಪರಿಹಾರ ಸೂಚಿಸುವಂತೆ ನ್ಯಾಯಾಲಯ ಆದೇಶಿಸಿದರೂ ಪಂ ಪಂ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದನ್ನು ಸಹ ಶ್ರೀಧರ ನಾಯಕ ನ್ಯಾಯಾಲಯದ ಗಮನಕ್ಕೆ ತಂದಿದ್ದು, ಪ ಪಂ ಕಚೇರಿ ಜಪ್ತು ಮಾಡಲು ನ್ಯಾಯಾಲಯ ಆದೇಶಿಸಿತು.
ಸದ್ಯ ನ್ಯಾಯಾಲಯ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಮಾಹಿತಿ ಪ ಪಂ ಸಿಬ್ಬಂದಿ ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ.