ದಾತ್ರಿ ನಗರದಲ್ಲಿನ ನಿವೇಶನಗಳಿಗೆ ಸೌಲಭ್ಯ ಕೊರತೆ, ಅಂಬೇಡ್ಕರ ನಗರದಲ್ಲಿನ ಅಂಗನವಾಡಿ ಸಮಸ್ಯೆ ಹಾಗೂ ಹಣಕಾಸು ವಿಷಯದಲ್ಲಿನ ಲೆಕ್ಕಾಚಾರ ಒಪ್ಪಿಸದ ಬಗ್ಗೆ ಯಲ್ಲಾಪುರ ಪಟ್ಟಣ ಪಂಚಾಯತದ ಶುಕ್ರವಾರದ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಅಧಿಕಾರಿಗಳು ಸೂಕ್ತ ಉತ್ತರ ನೀಡದ ಹಿನ್ನಲೆ ಪ ಪಂ ಸದಸ್ಯ ಸತೀಶ ನಾಯ್ಕ ಹಾಗೂ ರಾಧಾಕೃಷ್ಣ ನಾಯ್ಕ ಸದಸ್ಯರಿಗೆ ನೀಡಿದ ಖುರ್ಚಿ ತೊರೆದು ನೆಲಕ್ಕೆ ಕುಳಿತು ಧರಣಿ ನಡೆಸಿದರು.
ಹಿತ್ಲಕಾರಗದ್ದೆಯ ನಿವೇಶನಗಳನ್ನು ಪಟ್ಟಣ ಪಂಚಾಯತ ಹಸ್ತಾಂತರ ಮಾಡಿಕೊಂಡಿದ್ದು, ಅಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಮೂಲಭೂತ ಸೌಕರ್ಯ ಕಲ್ಪಿಸುವಂತೆ ಪಟ್ಟಣ ಪಂಚಾಯತ ಮೂಲ ಮಾಲಕರಿಗೆ ಬರೆದಿದೆ. ಆದರೆ, ಮೂಲ ಮಾಲಕರು `ತನಗೂ ಇದಕ್ಕೂ ಸಂಬ0ಧವಿಲ್ಲ’ ಎಂಬ ಅರ್ಥದಲ್ಲಿ ಉತ್ತರ ನೀಡಿದ್ದಾರೆ. ಆ ಪತ್ರವನ್ನು ಅಧಿಕಾರಿಗಳು ಸಭೆಯಲ್ಲಿ ಓದಿ ಹೇಳಿದ್ದು, ನಿವೇಶನ ಸಿದ್ದಪಡಿಸಿದವರು ಅರಣ್ಯ ಇಲಾಖೆ ಸ್ಥಳದಲ್ಲಿ ಬೋರ್ ನಿರ್ಮಿಸಿರುವ ವಿಷಯವನ್ನು ಸಭೆಯ ಮುಂದಿಟ್ಟರು. ಈ ಹಿನ್ನಲೆ ಪಟ್ಟಣ ಪಂಚಾಯತ ಸದಸ್ಯರು ಆಕ್ರೋಶವ್ಯಕ್ತಪಡಿಸಿದರು.
`ದಾತ್ರಿ ನಗರದಲ್ಲಿ ಎಲ್ಲಾ ವ್ಯವಸ್ಥೆ ಕಲ್ಪಿಸಿ ಎರಡು ವರ್ಷಗಳ ಕಾಲ ಅವುಗಳ ನಿರ್ವಹಣೆ ಮಾಡಲಾಗಿದೆ’ ಎಂದು ಮೂಲ ಮಾಲಕರು ಪತ್ರದಲ್ಲಿ ವಿವರಿಸಿದ್ದಾರೆ. ಆದರೆ, ಕನಿಷ್ಟ ಮೂಲಭೂತ ಸೌಕರ್ಯ ಒದಗಿಸದೇ ನಿವೇಶನಗಳನ್ನು ಹಸ್ತಾಂತರಪಡಿಸಿಕೊoಡ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸತೀಶ ನಾಯ್ಕ ಪಟ್ಟುಹಿಡಿದರು. ಅರಣ್ಯ ಇಲಾಖೆ ಜಾಗದಲ್ಲಿ ಬೋರ್ ನಿರ್ಮಿಸಿರುವುದನ್ನು ಸೇರಿ ವಿವಿಧ ಲೋಪಗಳಿದ್ದರೂ ಅದನ್ನು ಪ ಪಂ ಹಸ್ತಾಂತರಿಸಿಕೊoಡಿರುವ ಬಗ್ಗೆ ಪ್ರಶ್ನಿಸಿದರು..
`ಯಲ್ಲಾಪುರ ಜಾತ್ರೆಯಲ್ಲಿನ ಲೆಕ್ಕಾಚಾರವನ್ನು ಈವರೆಗೂ ಅಧಿಕಾರಿಗಳು ನೀಡಿಲ್ಲ. ದಿನ ನಿತ್ಯದ ಆಯ-ವ್ಯಯದ ಬಗ್ಗೆಯೂ 17 ತಿಂಗಳಿನಿAದ ಸದಸ್ಯರಿಗೆ ಮಾಹಿತಿ ನೀಡಿಲ್ಲ’ ಎಂಬ ವಿಷಯದ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯಿತು. `ಇನ್ನೂ ಕೆಲ ತಿಂಗಳುಗಳಲ್ಲಿ ಪ ಪಂ ಸದಸ್ಯರ ಅಧಿಕಾರ ಅವಧಿ ಮುಗಿಯಲಿದ್ದು, ಅಲ್ಲಿಯವರೆಗೂ ಅಧಿಕಾರಿಗಳು ಇದೇ ರೀತಿ ವರ್ತಿಸಲಿದ್ದಾರೆ’ ಎಂದು ಹಲವರು ದೂರಿದರು. ಪ ಪಂ ಉದ್ಯೋಗ ನೇಮಕಾತಿಯಲ್ಲಿ ಸದಸ್ಯರ ಅರಿವಿಲ್ಲದೇ ಅವರ ಹೆಸರಿನ ಜೊತೆ ಅನುಮೋದನೆ ನೀಡಿದ ಬಗ್ಗೆ ನಮೂದಿಸಿದ ಬಗ್ಗೆಯೂ ಚರ್ಚೆ ನಡೆಯಿತು. `ವಿವಿಧ ವಾರ್ಡಗಳಲ್ಲಿ ಸದಸ್ಯರಿಗೆ ಅರಿವಿಲ್ಲದೇ ಕೆಲಸ ನಡೆಯುತ್ತಿದೆ. ಈ ಬಗ್ಗೆ ಕಳೆದ ಸಭೆಯಲ್ಲಿ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಕೆಲವರು ದೂರಿದರು.
ಅಂಬೇಡ್ಕರ್ ನಗರದಲ್ಲಿ ಅಂಗನವಾಡಿ ಇಲ್ಲದ ಬಗ್ಗೆ ಸದಸ್ಯೆ ಶ್ಯಾಮಲಾ ಪಾಠಣಕರ್ ಆಕ್ರೋಶವ್ಯಕ್ತಪಡಿಸಿದರು. ಮದ್ಯ ಪ್ರವೇಶಿಸಿದ ಸದಸ್ಯ ಸೋಮೇಶ್ವರ ನಾಯ್ಕ `ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಅಧ್ಯಕ್ಷರು ಅಥವಾ ಅಧಿಕಾರಿಗಳು ತಮ್ಮ ಕೊಠಡಿ ಬಿಟ್ಟುಕೊಡಲಿ’ ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಪ ಪಂ ಕಚೇರಿಯಲ್ಲಿಯೇ ಒಂದು ಕೋಣೆಯನ್ನು ಅಂಗನವಾಡಿಗೆ ಕೊಡಲಿ ಎಂದು ಕೆಲ ಸದಸ್ಯರು ಸಲಹೆ ನೀಡಿದರು. `ಇನ್ನು ಎರಡು ದಿನದಲ್ಲಿ ಅಂಗನವಾಡಿ ನಿರ್ಮಾಣ ಕೆಲಸ ಶುರುವಾಗಲಿದೆ. ಎರಡು ತಿಂಗಳ ಒಳಗೆ ಕಾಮಗಾರಿ ಮುಕ್ತಾಯವಾಗಲಿದೆ’ ಎಂದು ಮುಖ್ಯಾಧಿಕಾರಿ ಸುನೀಲ ಗಾವಡೆ ಸದಸ್ಯರನ್ನು ಸಮಾಧಾನ ಮಾಡಿದರು.
`ಪ್ರತಿ ಬಾರಿಯೂ ಬರೇ ಭರವಸೆಗಳನ್ನು ಮಾತ್ರ ನೀಡಲಾಗುತ್ತಿದೆ. ಯಾವ ಕೆಲಸವೂ ಸರಿಯಾಗಿ ಆಗುತ್ತಿಲ್ಲ’ ಎಂದು ಅನೇಕರು ಅಸಮಧಾನವ್ಯಕ್ತಪಡಿಸಿದರು.