ಯಲ್ಲಾಪುರ: ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಆಡಳಿತ ನಡೆಸಿದ ಕಾರಣ ಮದನೂರು ಗ್ರಾಮ ಪಂಚಾಯತದ 10 ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನದಲ್ಲಿದ್ದ ರಾಜೇಶ ತಿನ್ನೇಕರ್ ಹಾಗೂ ಉಪಾಧ್ಯಕ್ಷರಾಗಿದ್ದ ದೀಪಾ ಸಿಂಧೆ ಹುದ್ದೆ ಕಳೆದುಕೊಂಡಿದ್ದಾರೆ.
ಯಲ್ಲಾಪುರ ತಾಲೂಕಿನ ಮದನೂರು ಗ್ರಾಮ ಪಂಚಾಯತದಲ್ಲಿ 13 ಜನ ಸದಸ್ಯರು. ಎಲ್ಲರೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಚುನಾಯಿತರಾಗಿದ್ದರು. ಆದರೆ, ನಂತರ ನಡೆದ ರಾಜಕೀಯ ವಿದ್ಯಮಾನದಿಂದ ಅಧ್ಯಕ್ಷ-ಉಪಾಧ್ಯಕ್ಷರು ಕಾಂಗ್ರೆಸ್ ಕಡೆ ಒಲವು ತೋರಿದ್ದರು. ಇತರೆ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದಿರುವುದು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಹಾಗೂ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು.
ಒಂದುವರೆ ವರ್ಷದ ನಂತರ ಶನಿವಾರ ಉಳಿದ ಸದಸ್ಯರು ಒಟ್ಟಾಗಿ ಅವಿಶ್ವಾಸ ಮಂಡನೆ ಮಾಡಿದರು. ಪ್ರಸ್ತುತ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದವರಿಗೆ ಅವರನ್ನು ಸೇರಿ 3 ಮತಗಳು ಚಲಾವಣೆಯಾದರೆ, ಅವರ ವಿರುದ್ಧ 10 ಮತ ಚಲಾವಣೆಯಾಗಿದ್ದವು. ಗ್ರಾ ಪಂ ಸದಸ್ಯರಾದ ಪ್ರಕಾಶ ಷಹಪುರಕರ, ವಿಠ್ಠು ಶೆಲ್ಕೆ, ಲಕ್ಷಣ ತೋರಥ, ಹನುಮಂತ ವಾರೇಗೌಡ, ಇಂದಿರಾ ನಾಯ್ಕ, ಜನಾಬಾಯಿ ಬರಾಗಡೆ, ಪ್ರಭಾ ನಾಯ್ಕ, ಸುನಂದಾ ವಡ್ಡರ, ಮಂಜುಳಾ ಕಳಸೂರಕರ ಹಾಗೂ ರೇಷ್ಮಾ ದೇಸಾಯಿ ಅವರು ಬಿಜೆಪಿ ಬೆಂಬಲಿತರಾಗಿದ್ದು, ಹಾಲಿ ಆಡಳಿತದಲ್ಲಿರುವವರ ವಿರುದ್ಧ ಮತ ಚಲಾಯಿಸಿದರು. ಈ ಹಿನ್ನಲೆ ರಾಜೇಶ ತಿನ್ನೇಕರ್ ಹಾಗೂ ದೀಪಾ ಸಿಂಧೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ತ್ಯಜಿಸಿದರು.
ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆ ನಂತರ ಗ್ರಾಮ ಪಂಚಾಯತ ಆಡಳಿತ ಮತ್ತೆ ಬಿಜೆಪಿ ತಕ್ಕೆಗೆ ಬಂದಿದ್ದರಿAದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಸಂತಸ ವ್ಯಕ್ತಪಡಿಸಿದರು. ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಗಣಪತಿ ಬೋಳಗಡ್ಡೆ, ಸೋಮೇಶ್ವರ ನಾಯ್ಕ, ಕೃಷ್ಣ ಮರಾಠಿ, ಸುಭಾಷ ತೋರಸ್ಕರ, ಮಹೇಶ ದೇಸಾಯಿ, ವಿಠ್ಠು ಪಾಂಡ್ರಮೀಸೇ ಸೇರಿ ಸಂಭ್ರಮಾಚರಣೆ ನಡೆಸಿದರು. ಬಿಜೆಪಿ ಶಕ್ತಿಕೇಂದ್ರ ಪ್ರಮುಖರಾದ ಚಂದು ಮಡಾಕರ, ನವಲು ಜೋರೆ, ವಿಠ್ಠು ಠಾಕೇಕರ, ಸೋ ಜಂಗ್ಲೆ, ರಮೇಶ ಗವಾಸ್ಕರ, ರವಿ ಸಿಂದೆ, ವಿಜಯಕುಮಾರ ಕಳಸೂರಕರ, ಶಂಕರ ಗೊಂದಳಿ ಇತರರು ಇದ್ದರು.