ದೇವಿ ಉತ್ಸವದಲ್ಲಿ ಚಲನಚಿತ್ರ ಗೀತೆ ಪ್ರಸಾರ ಮಾಡುವ ವಿಷಯದಲ್ಲಿ ಮುಂಡಗೋಡದ ಕೋಡಂಬಿಯಲ್ಲಿ ದೊಡ್ಡ ಗಲಾಟೆ ನಡೆದಿದೆ. ಎರಡು ಗುಂಪುಗಳ ನಡುವೆ ಹೊಡೆದಾಟವೂ ಆಗಿದ್ದು, ಡಾನ್ಸ್ ಮಾಡಲು ಬಿಡದ ಕಾರಣ ವ್ಯಕ್ತಿಯೊಬ್ಬರ ಕುತ್ತಿಗೆ ಬಳಿ ಇನ್ನೊಬ್ಬ ಚಾಕು ತಾಗಿಸಿ ಗಾಯಗೊಳಿಸಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಮಾರ್ಚ 3ರಂದು ಕೋಡಂಬಿಯಲ್ಲಿ ದೇವಿ ಉತ್ಸವ ನಡೆಯುತ್ತಿತ್ತು. ರಾತ್ರಿಯಿಡೀ ಅಲ್ಲಿನ ಧ್ವನಿ ವರ್ಧಕದಲ್ಲಿ ಚಿತ್ರಗೀತೆಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಮಾರ್ಚ 4ರ ನಸುಕಿನಲ್ಲಿ ದೇವಿ ಪೂಜೆ ಹಾಗೂ ಇನ್ನಿತರ ಕಾರ್ಯಕ್ರಮ ನಡೆಸುವುದಕ್ಕಾಗಿ ಚಿತ್ರಗೀತೆಗಳ ಪ್ರಸಾರವನ್ನು ಸ್ಥಗಿತಗೊಳಿಸಲಾಯಿತು. ಇದನ್ನು ಪಾಳಾದ ನಾಗರಾಜ ಕಟ್ಟಿಮನಿ ವಿರೋಧಿಸಿದರು.
55 ವರ್ಷದ ನಾಗರಾಜ ಕಟ್ಟಿಮನಿ ಅವರ ವರನಟ ರಾಜ್ಕುಮಾರ್ ಅವರ ಅಭಿಮಾನಿ. ಹೀಗಾಗಿ ತಮ್ಮ ಮಗನಿಗೂ ಅವರು ರಾಜಕುಮಾರ ಎಂದೇ ಹೆಸರಿಟ್ಟಿದ್ದರು. ಕೋಡಂಬಿ ಗ್ರಾಮದ ಮಾರಿಕಾಂಬಾ ದೇವಸ್ಥಾನ ಪಾದಕಟ್ಟೆ ಹತ್ತಿರ ಬಂದ ಅವರು `ರಾಜಕುಮಾರ ಅವರ ಹಾಡು ಹಾಕಿ’ ಎಂದು ತಾಕೀತು ಮಾಡಿದರು. ಆಗ, ಕೋಡಂಬಿ ಬಳಿಯ ಪಾಳದ ದಿಂಗಾಲಯ್ಯ ಹಿರೇಮಠ್ ಅವರು `ದೇವಿಯರ ಮುಂದಿನ ಕಾರ್ಯಕ್ರಮ ನಡೆಯಬೇಕು. ಹೀಗಾಗಿ ಈಗ ಹಾಡು ಹಚ್ಚುವುದು ಬೇಡ’ ಎಂದು ಹೇಳಿದರು.
ಆ ಕಾರ್ಯಕ್ರಮದಲ್ಲಿದ್ದ ಸ್ಥಳೀಯರಾದ ಮಂಜುನಾಥ, ರಾಜು, ಶಂಕರ, ದತ್ತಣ್ಣ, ಪರಶುರಾಮ, ಸುರೇಶ ಸೇರಿ ಬಹುತೇಕರು ದಿಂಗಾಲಯ್ಯ ಹಿರೇಮಠ್ ಅವರ ಮಾತಿಗೆ ಧ್ವನಿಗೂಡಿಸಿದರು. ಆದರೆ, ನಾಗರಾಜ ಕಟ್ಟಿಮನಿ ಅವರು ಇದಕ್ಕೆ ಒಪ್ಪಲಿಲ್ಲ. `ನಾನು ಡಾನ್ಸ್ ಮಾಡಬೇಕು. ರಾಜಕುಮಾರ ಅವರ ಹಾಡು ಹಾಕಿ’ ಎಂದು ಪಟ್ಟು ಹಿಡಿದರು. `ಯಾವುದೇ ಕಾರಣಕ್ಕೂ ಮೈಕ್ ಬಂದ್ ಮಾಡಲು ಬಿಡುವುದಿಲ್ಲ. ದೇವಿ ಕಾರ್ಯಕ್ರಮ ಆಮೇಲೆ ಮಾಡೋಣ. ಗ ಹಾಡು ಹಾಕಿ’ ಎಂದು ಕೂಗಲು ಶುರು ಮಾಡಿದರು. ಒಪ್ಪದಿದ್ದಾಗ ದೇವಿ ಉತ್ಸವದಲ್ಲಿಯೇ `ಬೋ.. ಸೂ.. ಮಕ್ಕಳಾ’ ಎನ್ನುತ್ತ ಅಲ್ಲಿದ್ದವರನ್ನು ಬೈದರು.
ಬುದ್ದಿ ಹೇಳಲು ಹೋದ ದಿಂಗಲಯ್ಯ ಹಿರೇಮಠ್ ಅವರ ಮೈಮೇಲೆ ಬಿದ್ದು ನಾಗರಾಜ ಕಟ್ಟಿಮನಿ ಹೊರಳಾಟ ನಡೆಸಿದರು. ಬಿಡಿಸಲು ಬಂದವರನ್ನು ದೂಡಿ ಎಳೆದಾಡಿದರು. ಈ ವೇಳೆ ನಾಗರಾಜ ಕಟ್ಟಿಮನಿ ಅವರ ಮಗ ರಾಜಕುಮಾರ ಕಟ್ಟಿಮನಿ ಅಲ್ಲಿಗೆ ಬಂದರು. ಜೊತೆಗೆ ಪಾಳದ ಬಸವರಾಜ ಬೊಮ್ಮನಳ್ಳಿ, ಕೊಪ್ಪದ ಪಕ್ಕಿರಪ್ಪ ಹಕಾರಿ, ಸೌಮ್ಯ ಹಕಾರಿ ಇನ್ನುಳಿದ ಹಲವರು ಚಿತ್ರಗೀತೆ ಹಾಕುವಂತೆ ಒತ್ತಡ ತಂದರು. ಅದನ್ನು ಒಪ್ಪದೇ ಇದ್ದಾಗ ಎರಡು ಗುಂಪುಗಳ ನಡುವೆ ಜಗಳ ಶುರುವಾಯಿತು.
ಆಗ ಮೊದಲು ನಾಗರಾಜ ಕಟ್ಟಿಮನಿ ಅಲ್ಲಿದ್ದ ಮಂಜುನಾಥ ಅವರಿಗೆ ಹೊಡೆದರು. ಉಳಿದವರು ಹೊಡೆಯುವಂತೆ ಪ್ರೇರೇಪಿಸಿದಾಗ ನಾಗರಾಜ ಕಟ್ಟಿಮನಿ ಮಂಜುನಾಥ ಅವರ ಕುತ್ತಿಗೆ ಬಳಿ ಚಾಕು ಹಿಡಿದರು. ಆ ಜಾಕುವಿನಿಂದಲೇ ಹೊಡೆದ ಪರಿಣಾಮ ಮಂಜುನಾಥರಿಗೆ ಗಾಯವಾಯಿತು. ನಂತರ ಇನ್ನಷ್ಟು ಜನ ಅಲ್ಲಿ ಜಮಾಯಿಸಲು ಶುರು ಮಾಡಿದ್ದು, ನಾಗರಾಜ ಕಟ್ಟಿಮನಿ ಜೊತೆ ಅವರ ಬೆಂಬಲಿಗರು ಓಡಿ ಪರಾರಿಯಾದರು. ಈ ಬಗ್ಗೆ ಊರಿನಲ್ಲಿ ಚರ್ಚೆ ನಡೆಸಿದ ನಂತರ ದಿಂಗಾಲಯ್ಯ ಹಿರೇಮಠ್ ಪೊಲೀಸ್ ದೂರು ನೀಡಿದರು.