ಕಾರವಾರ: ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, `ನೌಕಾನೆಲೆಯ ಅಧಿಕಾರಿಗಳು ಜಿಲ್ಲಾಡಳಿತದ ಈ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಬೇಕು’ ಎಂದು ತಾಕೀತು ಮಾಡಿದರು. `ಸೀಬರ್ಡ್ ನೌಕಾನೆಲೆ ಬಳಿಯ ಹೆದ್ದಾರಿಯಲ್ಲಿ ಕಂಡು ಬರುವ ಕೃತಕ ನೆರೆಯನ್ನು ತಡೆಯಲು ಶಾಶ್ವತ ಪರಿಹಾರ ಅಗತ್ಯ’ ಎಂದು ಹೇಳಿದರು.
`ಮಳೆಗಾಲದಲ್ಲಿ ಸೀ ಬರ್ಡ್ ನೌಕಾನೆಲೆ ಬಳಿಯ ಹೆದ್ದಾರಿ ಬಳಿ ಗುಡ್ಡದಿಂದ ಬರುವ ನೀರು ಸರಾಗವಾಗಿ ಹರಿದು ಸಮುದ್ರ ಸೇರಲು ಇರುವ ಅಡೆತಡೆಗಳನ್ನು ಶಾಶ್ವತವಾಗಿ ನಿವಾರಿಸುವ ನಿಟ್ಟಿನಲ್ಲಿ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ಸೀಬರ್ಡ್ ಮತ್ತು ನೌಕಾನೆಲೆ ಅಧಿಕಾರಿಗಳು ತ್ವರಿತ ಕ್ರಮ ಜರುಗಿಸಬೇಕು’ ಎಂದು ಅವರು ಸೂಚಿಸಿದರು.
ಈ ವೇಳೆ ಜಿಲ್ಲೆಯಲ್ಲಿ ಕಾರವಾರದಿಂದ ಭಟ್ಕಳದವರೆಗಿನ ರೈಲು ಮಾರ್ಗದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿಗಳು ಮತ್ತು ಪ್ರಯಾಣಿಕರ ಹಿತದೃಷ್ಠಿಯಿಂದ ಕೈಗೊಳ್ಳಬೇಕಾಗಿರುವ ಸುಧಾರಣಾ ಕ್ರಮಗಳು ಹಾಗೂ ರೂಪಿಸಬಹುದಾದ ಯೋಜನೆಗಳ ಕುರಿತ ವಿವರವಾದ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಕೊಂಕಣ ರೈಲ್ವೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ರೈಲ್ವೆಗೆ ಸಂಬoಧಪಟ್ಟ ಯೋಜನೆಗಳನ್ನು ಅಭಿವೃಧ್ದಿಪಡಿಸುವ ಕುರಿತಂತೆ ರೈಲ್ವೆ ಖಾತೆಯ ಸಚಿವರೊಂದಿಗೆ ಚರ್ಚಿಸಿ ಅವುಗಳ ಸಂಪೂರ್ಣ ಅನುಷ್ಠಾನಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು. ಕೊಂಕಣ ರೈಲ್ವೆಗೆ ಸಂಬoಧಪಟ್ಟoತೆ ಬಾಕಿ ಇರುವ ಭೂ ಸ್ವಾಧೀನ ಪ್ರಕರಣಗಳ ಪರಿಹಾರದ ಮೊತ್ತವನ್ನು ಸಂತ್ರಸ್ಥರಿಗೆ ಶೀಘ್ರದಲ್ಲಿ ಪಾವತಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
Discussion about this post