ಮುಂಡಗೋಡಿನ ಬಿಜೆಪಿ ಯುವ ಮೋರ್ಚಾದವರು ರಾಹುಲ್ ಗಾಂಧೀ ಅವರ ಪೃತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ. ಯಲ್ಲಾಪುರ ಯುವ ಕಾಂಗ್ರೆಸ್ ತಾಲೂಕಾ ಅಧ್ಯಕ್ಷ ಗಣೇಶ ಹೆಗಡೆ ಇದನ್ನು ಖಂಡಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಮುಂಡಗೋಡಿನ ಬಿಜೆಪಿಗರು ಶುಕ್ರವಾರ ಪ್ರತಿಭಟಿಸಿದರು. `ನೈತಿಕ ಹೊಣೆ ಹೊತ್ತು ಈ ಇಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದಕ್ಕೆ ಪ್ರತಿಯಾಗಿ `ಬಿಜೆಪಿಗರಿಗೆ ನೈತಿಕತೆ ಪ್ರಶ್ನಿಸುವ ನೈತಿಕತೆ ಇಲ್ಲ’ ಎಂದು ಗಣೇಶ ಹೆಗಡೆ ಹೇಳಿದ್ದಾರೆ.
`ದೇಶದ ಬದಲಾವಣೆಗೆ ಶಕ್ತಿ ನೀಡಿದ್ದು ನ್ಯಾಶನಲ್ ಹೆರಾಲ್ಡ್ ಪತ್ರಿಕೆ. ಐತಿಹಾಸಿಕ ಸಂಸ್ಥೆಯ ಬಗ್ಗೆ ನಿಷ್ಟೆಯಿಂದ ಕೆಲಸ ಮಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ ವೈರತ್ವದ ಹಿನ್ನಲೆ ಆರೋಪ ಮಾಡುತ್ತಿದೆ. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷಪ್ರೇಮಕುಮಾರ್ ನಾಯ್ಕ ಸೇರಿ ಆ ಪಕ್ಷದ ಯಾರೊಬ್ಬರಿಗೂ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಿಜೆಪಿ ತಮ್ಮ ರಾಜಕೀಯಕ್ಕೆ ಬಳಸಿಕೊಂಡಿದ್ದು, ರಾಜಕೀಯ ಪ್ರೇರಿತ ಪ್ರತಿಭಟನೆಗಳಿಗೆ ಜನ ಮನ್ನಣೆ ನೀಡುವುದಿಲ್ಲ’ ಎಂದು ಗಣೇಶ ಹೆಗಡೆ ಹೇಳಿದ್ದಾರೆ.
`ಬಿಜೆಪಿ ಆಡಳಿತದಲ್ಲಿ ಸಾವಿರಾರು ಕೋಟಿಯ ಭ್ರಷ್ಟಾಚಾರ ನಡೆದಿದೆ. ಅದನ್ನು ಮುಚ್ಚಿಹಾಕಲು ಬಿಜೆಪಿ ಕಾಂಗ್ರೆಸ್ ವಿರುದ್ಧ ದಾಳಿ ನಡೆಸುತ್ತಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಸತ್ಯದ ಜೊತೆಯಿರಲಿದ್ದಾರೆ. ಬಿಜೆಪಿಯ ದಬ್ಬಾಳಿಕೆಗೆ ಯಾರೂ ಬಗ್ಗುವುದಿಲ್ಲ’ ಎಂದು ಗಣೇಶ ಹೆಗಡೆ ಹೇಳಿಕೆ ನೀಡಿದ್ದಾರೆ.