ಕುಮಟಾ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಸ್ಪರ್ಧೆ `ಗುಣಿಜ ಬಂದೀಶ್ ರಾಷ್ಟ್ರೀಯ ಪ್ರತಿಯೋಗಿತಾ’ದಲ್ಲಿ ಭಾಗವಹಿಸಿದ ತೇಜಸ್ವಿನಿ ದಿಗಂಬರ ವೆರ್ಣೇಕರ್ ಪ್ರಥಮ ಬಹುಮಾನ ಪಡೆದಿದ್ದಾರೆ. 1.25 ಲಕ್ಷ ರೂ ಹಾಗೂ ಸ್ಮರಣಿಗೆ ಜೊತೆಗಿನ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗಿದೆ.
ಪದ್ಮಭೂಷಣ ಪಂಡಿತ ಸಿ.ಆರ್.ವ್ಯಾಸ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಗ್ರೇಸ್ ಫೌಂಡೇಶನ್ ಮತ್ತು ಪಂಚಮ್ ನಿಷಾದ್ ಈ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ಪಂಡಿತ ಸಿ.ಆರ್.ವ್ಯಾಸ್ ಅವರು ರಚಿಸಿದ ಬಂದೀಶ್’ಗಳನ್ನು ಹಾಡಬೇಕಿದ್ದು, ರಾಜ್ಯದ ನಾನಾ ಭಾಗಗಳಿಂದ ಸ್ಪರ್ಧಿಗಳು ಬಂದಿದ್ದರು. 3 ಹಂತದಲ್ಲಿ ಸ್ಪರ್ಧೆ ನಡೆಯಿತು.
ಪದ್ಮಭೂಷಣ ಸಾಜನ್ ಮಿಶ್ರ, ಪದ್ಮಶ್ರೀ ಸತೀಶ ವ್ಯಾಸ, ಪದ್ಮಶ್ರೀ ಪಂಡಿತ ಉಲ್ಹಾಸ್ ಕಶಾಲ್ಕರ್, ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ, ಪದ್ಮಶ್ರೀ ಸುರೇಶ ತಲ್ವಾಲ್ಕರ್, ದೇವಕಿ ಪಂಡಿತ, ಪದ್ಮಶ್ರೀ ಸತೀಶ ವ್ಯಾಸ, ಸುಹಾಸ ವ್ಯಾಸ, ವಿದುಷಿ ನಿರ್ಮಲಾ ಗೋಗಟೆ ನಿರ್ಣಾಯಕರಾಗಿದ್ದರು. ಅವರೆಲ್ಲರ ಗಮನ ಸೆಳೆದ ತೇಜಸ್ವಿನಿ ಮೊದಲ ಬಹುಮಾನ ಪಡೆದರು.
ತೇಜಸ್ವಿನಿ ಅವರು ತಿರುಪತಿ, ಪ್ರಯಾಗ, ತ್ರಿಪುರ, ಕೊಲ್ಕತ್ತಾ, ಮುಂಬೈ, ಜಲಂಧರ್, ವಾರಾಣಸಿ, ಸೋನಭದ್ರ, ತಲೇಗಾಂವ್, ಸೊಲ್ಲಾಪುರ, ಬೆಂಗಳೂರು, ಗಾಣಗಾಪುರ, ಅಗರ್ತಲಾ ಹಾಗೂ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಳೆ ಅಯೋಧ್ಯೆಯಲ್ಲಿ ಸಹ ತಮ್ಮ ಗಾಯನ ಪ್ರಸ್ತುತ ಪಡಿಸಿದ್ದಾರೆ.