`ನಮ್ಮೂರ ಮಂದಾರ ಹೂವೆ’ ಚಿತ್ರದ ಚಿತ್ರಿಕರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಯಾಣಕ್ಕೆ ಬಂದಿದ್ದ ನಟ ಶಿವರಾಜಕುಮಾರ 29 ವರ್ಷಗಳ ಬಳಿಕ ಮತ್ತೆ ಇಲ್ಲಿಗೆ ಬಂದಿದ್ದಾರೆ. ಈ ಬಾರಿ ಅವರು ತಮ್ಮ ಪತ್ನಿ ಗೀತಾ ಶಿವರಾಜಕುಮಾರ ಅವರನ್ನು ಕರೆದುಕೊಂಡು ಬಂದಿದ್ದರು.
ಯಾಣದ ಕಲ್ಬಂಡೆಗಳ ಬಳಿ ತೆರಳಿದ ಶಿವರಾಜಕುಮಾರ `ನಮ್ಮೂರ ಮಂದಾರ ಹೂವೆ’ ಚಿತ್ರೀಕರಣದ ದಿನಗಳನ್ನು ಮೆಲಕು ಹಾಕಿದರು. ಇಲ್ಲಿ ರಮೇಶ ಅರವಿಂದ ಅವರ ಜೊತೆಗಿನ ಒಡನಾಟವನ್ನು ಅವರು ಪತ್ನಿ ಬಳಿ ಹೇಳಿಕೊಂಡರು.
29 ವರ್ಷಗಳ ಬಳಿಕ ಯಾಣಕ್ಕೆ ಭೇಟಿ ನೀಡಿದ ಬಗ್ಗೆ ಶಿವರಾಜಕುಮಾರ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊAಡಿದ್ದಾರೆ. ಇದರೊಂದಿಗೆ `ಬಾಳಿನ ಬೆನ್ನು ಹೊತ್ತಿ ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು’ ಎಂದು ಅವರು ಬರೆದುಕೊಂಡಿದ್ದಾರೆ.
ಕಾನ್ಸರ್ ಚಿಕಿತ್ಸೆಗಾಗಿ ಶಿವರಾಜಕುಮಾರ ಅಮೇರಿಕಾಗೆ ಹೋಗಿದ್ದರು. ಚಿಕಿತ್ಸೆಯಿಂದ ಗುಣಮುಖರಾದ ಅವರು ಇದೀಗ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಯಾಣದ ಕಲ್ಬಂಡೆ ಜೊತೆ ಶಿವರಾಜಕುಮಾರ್ ನಿಂತಿರುವ ಫೋಟೋ ನೋಡಿದ ಅಭಿಮಾನಿಗಳು `ನೀವು ಬಂಡೆಯAತೆ ಗಟ್ಟಿ’ ಎಂದು ಕಮೆಂಟ್ ಮಾಡಿದ್ದಾರೆ.