ಯಲ್ಲಾಪುರ: ಹುಲ್ಲೋರಮನೆಯ ದೇಗುಲ ಆವರಣದಲ್ಲಿ ಶನಿವಾರ ಭಕ್ತಿಭಾವದಿಂದ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣಾ ಸಮಾರಂಭ’ ನಡೆದಿದ್ದು, `ಸಹನೆಯೇ ಭಗವದ್ಗೀತೆಯ ಮೂಲ ಆಶಯ’ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತಿ ಶ್ರೀಗಳು ಪ್ರತಿಪಾದಿಸಿದ್ದಾರೆ.
`ಶಂಕರ ಭಗವದ್ಪಾದರು, ರಾಮಕೃಷ್ಣ ಪರಮಹಂಸರು ಸೇರಿ ಅನೇಕರು ಭಗವದ್ಗೀತೆಯ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ. ಗಾಂಧೀಜಿಯವರನ್ನು ಮಹಾತ್ಮರನ್ನಾಗಿಸಿದ್ದು ಸಹ ಭಗವದ್ಗೀತೆಯ ಸಾರ’ ಎಂದು ಸ್ವರ್ಣವಲ್ಲಿ ಶ್ರೀಗಳು ಹೇಳಿದ್ದಾರೆ. `ತ್ಯಾಗವೇ ಭಗವದ್ಗೀತೆಯ ಮುಖ್ಯ ವಿಷಯ ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. ಕರ್ಮಯೋಗವೇ ಭಗವದ್ಗೀತೆಯ ಮುಖ್ಯ ವಿಷಯ ಎಂದು ಗಾಂಧೀಜಿ ಹೇಳಿದ್ದಾರೆ. ಅದರೊಂದಿಗೆ ಸಹನೆಯೇ ಭಗವದ್ಗೀತೆ ಮುಖ್ಯ ವಿಷಯ’ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತಿ ಶ್ರೀಗಳು ಪುನರುಚ್ಚರಿಸಿದರು.
`ಸಿಟ್ಟು, ಆತುರತೆಯಿಂದ ದೂರವುಳಿದು ಸಹನೆಯಿಂದ ಆಧ್ಯಾತ್ಮಕ ಸಾಧನೆ. ಸಹನೆ ಕಾಪಾಡಿಕೊಳ್ಳುವವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ, ಧ್ಯಾನಯೋಗ ಎಲ್ಲವೂ ತಾಳ್ಮೆಯ ಅಭ್ಯಾಸವಾಗಿದೆ. ಭಗವದ್ಗೀತೆಯಿಂದ ಮನಸ್ಸನ್ನು ಸ್ವಯಂ ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯ’ ಎಂದರು. `ವೇದ-ಸಂಸ್ಕೃತ, ವಿದ್ವಾಂಸ-ಆಚಾರವoತರು ಎಲ್ಲರೂ ಒಂದೇ ಕಡೆ ಇರುವ ಉತ್ತರ ಕನ್ನಡ ಜಿಲ್ಲೆ ಭಗವದ್ಗೀತೆ ಜಿಲ್ಲೆ ಎಂದು ಘೋಷಣೆಯಾಗುವ ದಿನ ದೂರವಿಲ್ಲ’ ಎಂದವರು ಅಭಿಪ್ರಾಯಪಟ್ಟರು.
ಶ್ರೀಗಳಿಗೆ ಹನುಮಂತನ ಸ್ವಾಗತ
`ಕೃಷ್ಣನಿಂದ ನೇರವಾಗಿ ಭಗವದ್ಗೀತೆ ಕೇಳಿಸಿಕೊಂಡವರು ಅರ್ಜುನ ಮಾತ್ರವಲ್ಲ. ಅರ್ಜುನನ ರಥದ ಮೇಲೆ ಕೂತಿದ್ದ ಆಂಜಿನೇಯ ಸಹ ಕೃಷ್ಣನ ಬಾಯಿಯಿಂದ ಹೊರಬಂದ ಭಗವದ್ಗೀತೆಯನ್ನು ಕೇಳಿಸಿಕೊಂಡಿದ್ದಾನೆ. ಹುಲ್ಲೋರಮನೆ ಕ್ಷೇತ್ರದಲ್ಲಿ ಜಾಗೃತವಾದ ಆಂಜನೇಯನಿದ್ದಾನೆ. ಮರದಿಂದ ಮರಕ್ಕೆ ಹಾರುವ ಮಂಗಗಳು ಸಾಮಾನ್ಯ. ಆದರೆ, ತಾವು ಬರುವಾಗ ಮರದ ಮೇಲಿದ್ದ ಕೋತಿ ಎರಡು-ಮೂರು ಸಲ ರೆಂಬೆ-ಕೊoಬೆಗಳನ್ನು ಕುಣಿಸಿದ್ದು ವಿಶೇಷ’ ಎಂದು ಶ್ರೀಗಳು ಅನುಭವ ಹಂಚಿಕೊoಡರು.
ಕೈದಿ ಮನಸ್ಸು ಪರಿವರ್ತಿಸಿದ ಭಗವದ್ಗೀತೆ!
ಕಾರವಾರ ಕಾರಾಗೃಹದಲ್ಲಿದ್ದ ಕೈದಿಯೊಬ್ಬರಿಗೆ ಗಣೇಶ ಭಟ್ಟ ಅವರು ಭಗವದ್ಘೀತೆಯ ಬಗ್ಗೆ ವಿವರಿಸಿದ್ದರು. ಅವರಿಂದ ಆಶೀರ್ವಚನ ಪಡೆದು ಕಾಲಿಗೆ ನಮಸ್ಕರಿಸಿ ಪ್ರಸಾದ ಪಡೆದ ಆ ದಾಂಡಿಗ ಮರುದಿನದಿಂದಲೇ ಭಗವದ್ಘೀತೆ ಅಧ್ಯಯನ ನಡೆಸಿದ್ದು, ಆತನ ಮನಸ್ಸು ಸಂಪೂರ್ಣವಾಗಿ ಪರಿವರ್ತನೆಯಾಗಿದೆ. ಇದರಿಂದ ಕಾರಾಗೃಹದ ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದು, ಭಗವದ್ಘೀತೆ ಅಭಿಯಾನದ ಜಿಲ್ಲಾಧ್ಯಕ್ಷ ವಿನೋದ ಪ್ರಭು ಅವರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ.
`ಪರಜಿಲ್ಲೆಯಿಂದ ಗಡಿಪಾರು ಆಗಿ ಜೈಲು ಸೇರಿದ್ದ ಕೈದಿಯೂ ಭಗವದ್ಘೀತೆಯ ಸಾರ ಕೇಳಿ ಪುಣ್ಯದ ದಾರಿ ಹಿಡಿದಿದ್ದು, ಇಂಥ ಸಾವಿರಾರು ಜನರಿಗೆ ಭಗವದ್ಘೀತೆ ದಾರಿದೀಪವಾಗಿದೆ’ ಎಂದು ಭಗವದ್ಘೀತೆ ಅಭಿಯಾನದ ಜಿಲ್ಲಾಧ್ಯಕ್ಷ ಮುರಳೀಧರ ಪ್ರಭು ಸಭೆಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ಭಗವದ್ಘೀತೆ ಅರಿವು ಮೂಡಿಸುವುದಕ್ಕಾಗಿ ಎಲ್ಲಡೆ ವಿವಿಧ ಸ್ಪರ್ಧೆ ನಡೆಸಿರುವ ಬಗ್ಗೆ ಕೆಕೆ ಬೋಡೆ ವಿವರಿಸಿದರು. ಅಭಿಯಾನದ ತಾಲೂಕಾಧ್ಯಕ್ಷ ಜಿ ಎನ್ ಭಟ್ಟ ತಟ್ಟಿಗದ್ದೆ ಅವರು ಹೊರತಂದ ಸುಜ್ಞಾನ ವಾಹಿನಿ ವಿಶೇಷ ಸಂಚಿಕೆಯನ್ನು ಶ್ರೀಗಳು ಬಿಡುಗಡೆ ಮಾಡಿದರು.
ಇದನ್ನೂ ಓದಿ: ಸಾವಿರ ಸಾವಿರ ಪುಸ್ತಕದ ಸರದಾರ: ಭಗವದ್ಗೀತೆ ಸಂದೇಶ ಸಾರುವ ಗುತ್ತಿಗೆದಾರ!
ಭಗವದ್ಗೀತೆಯಿಂದ ಜಗಳ ಮಾಯ!
ಸಿದ್ದಾಪುರದ ರಾಜಾರಾಮ ಚೈತನ್ಯ ಆಶ್ರಮದ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ `ಸಂಸಾರದ ಜಂಜಾಟದ ನಡುವೆ ಶಾಂತಿ ಬಯಸುವವರಿಗೆ ಭಗವದ್ಗೀತೆ ದಿಕ್ಸೂಚಿ. ಭಗವದ್ಗೀತೆ ಅಧ್ಯಯನದಿಂದ ಕಷ್ಟಗಳು ದೂರವಾಗುತ್ತದೆ. ವಿಷ್ಣು ಸಹಸ್ರನಾಮ ಹಾಗೂ ಭಗವದ್ಗೀತೆಯ ಪಠಣದಿಂದಲೇ ಪಾಪಗಳು ಮಾಯವಾಗುತ್ತದೆ. ಅದನ್ನು ಅರ್ಥಯಿಸಿಕೊಂಡು ನಡೆದರೆ ಬದುಕು ಪಾವನವಾಗುತ್ತದೆ. ಹೀಗಾಗಿ ಬಾಲ್ಯದಲ್ಲಿಯೇ ಭಗವದ್ಗೀತೆ ಪಾಠ ನಡೆಯಬೇಕು’ ಎಂದು ಕರೆ ನೀಡಿದರು.
ನೆಲೆಮಾವು ಮಠದ ಮಾಧವಾನಂದ ಭಾರತಿ ಸ್ವಾಮೀಜಿ ಶ್ರೀಗಳು ಆಶೀರ್ವಜನ ನೀಡಿ `ಗುರು-ಹಿರಿಯರ ಮಾರ್ಗದರ್ಶನ, ನಿರಂತರ ಅಧ್ಯಯನದಿಂದ ಸಾಧನೆ ಸಾಧ್ಯ. ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಬದುಕು ಪಾವನ. ಪ್ರತಿ ದಿನ ಒಂದು ಅಧ್ಯಾಯ ಭಗವದ್ಗೀತೆ ಓದುವ ಮೂಲಕ ಧರ್ಮ ಮಾರ್ಗದಲ್ಲಿ ನಡೆಯಲು ಶಪಥ ಮಾಡಬೇಕು’ ಎಂದು ಕರೆ ನೀಡಿದರು.