ಕಾರವಾರ: ಸರ್ಕಾರದ ಹೊಸ ಸೂಚನೆ ಪ್ರಕಾರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮಾಡಿಸಲು ಆಯುಷ್ಮಾನ್ ಯೋಜನೆಯ ಅನುಮೋದನೆ ಕಡ್ಡಾಯ. ಆಯುಷ್ಮಾನ್ ಯೋಜನೆ ಅನುಮೋದನೆಗೆ 6 ತಾಸು ಬೇಕು. ಸ್ಕಾನಿಂಗ್ ನಂತರ ಪೂಣಾದಿಂದ ಸ್ಕಾನಿಂಗ್ ವರದಿ ಅಧಿಕೃತವಾಗಿ ವೈದ್ಯರ ಕೈ ಸೇರಲು ಕನಿಷ್ಟ 5 ತಾಸು ಬೇಕು. ಅಷ್ಟರೊಳಗೆ ರೋಗಿ ಬದುಕಿದ್ದರೆ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ!
ತುರ್ತು ಚಿಕಿತ್ಸೆಗಾಗಿ ಶನಿವಾರ ಜಿಲ್ಲಾ ಆಸ್ಪತ್ರೆಗೆ ಬಂದ ರೋಗಿಯೊಬ್ಬರಿಗೆ ಆರು ತಾಸು ಕಾಯಿಸಲಾಗಿದ್ದು, ಸರ್ಕಾರದ ಹೊಸ ಆದೇಶ ತೋರಿಸಿ ವೈದ್ಯರು ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನು ಅರಿತ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ವೈದ್ಯಾಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. `ರೋಗಿಗೆ ಯೋಗ್ಯ ಚಿಕಿತ್ಸೆ ನೀಡದಿದ್ದರೇ ನೀವೇ ಹೊಣೆ’ ಎಂದು ಮಾಧವ ನಾಯಕ ಪಟ್ಟು ಹಿಡಿದ ನಂತರ ಮಾನವೀಯ ನೆಲೆಯಲ್ಲಿ ವೈದ್ಯರು ಚಿಕಿತ್ಸೆ ಶುರು ಮಾಡಿದರು.
ಅಂಕೋಲಾದ ವಿಶ್ವನಾಥ ಗಾಂವ್ಕರ್ ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ಅಂಕೋಲಾದ ವೈದ್ಯರು `ತುರ್ತು ಚಿಕಿತ್ಸೆ ಅಗತ್ಯ’ ಎಂದು ನಮೂದಿಸಿ ಅವರನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದರು. ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾದ ವಿಶ್ವನಾಥ ಗಾಂವ್ಕರ್ ಅವರ ಕುಟುಂಬದವರಿಗೆ ಆ ನಂತರ ಸರ್ಕಾರದ ಹೊಸ ಆದೇಶದ ಬಗ್ಗೆ ಅರಿವಾಗಿದ್ದು, ಆರು ತಾಸುಗಳ ಕಾಲ ಆಸ್ಪತ್ರೆ ಆವರಣದಲ್ಲಿ ಕಾದರು. ಅದಾಗಿಯೂ ಆಯುಷ್ಮಾನ್ ಭಾರತ್ ಯೋಜನೆಯಿಂದ ಅನುಮೋದನೆ ಸಿಗಲಿಲ್ಲ. ಹೀಗಾಗಿ ಅವರು ಬೇರೆ ದಾರಿಯಿಲ್ಲದೇ ಮಾಧವ ನಾಯಕ ಅವರಿಗೆ ಫೋನು ಮಾಡಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಹೊಸ ಸುತ್ತೋಲೆ ಹೊರಡಿಸಿದೆ. ಡಿಸೆಂಬರ್ 1ರಿಂದ ಈ ಆದೇಶ ಅನ್ವಯವಾಗುತ್ತಿದ್ದು, ಇದರಿಂದ ಜನರಿಗೆ ಉಪಯೋಗಕ್ಕಿಂದ ಉಪದ್ರವಗಳೇ ಹೆಚ್ಚು. ಅನಗತ್ಯವಾಗಿ ರೋಗಿಗಳಿಗೆ ಸ್ಕಾನಿಂಗ್ ಮಾಡುವುದನ್ನು ತಡೆಯುವುದಕ್ಕಾಗಿ ಈ ಕ್ರಮ ಅನುಸರಿಸಿರುವುದಾಗಿ ಆರೋಗ್ಯ ಇಲಾಖೆ ಹೇಳಿಕೊಂಡಿದೆ. ಹೀಗಾಗಿ ರೋಗಿಯೊಬ್ಬರಿಗೆ ಸ್ಕಾನಿಂಗ್ ಮಾಡಬೇಕು ಎಂದು ವೈದ್ಯರು ಶಿಫಾರಸ್ಸು ಮಾಡಿದ ನಂತರವೂ ರೋಗಿಯ ಎಲ್ಲಾ ದಾಖಲೆಗಳನ್ನು ಆನ್ಲೈನ್ ಮೂಲಕ ಲಾಗ್ಇನ್ ಆಗಿ ಸಲ್ಲಿಸುವುದು ಕಡ್ಡಾಯ. ಅದಾದ ನಂತರ ಆಯುಷ್ಮಾನ್ ಭಾರತ್ ಯೋಜನೆ ಅಡಿ ಅದಕ್ಕೆ ಅನುಮೋದನೆ ನೀಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ನಡೆಸಲು ಆರು ತಾಸು ಬೇಕೇ ಬೇಕು!
ಈ ಎಲ್ಲಾ ವಿಷಯ ಅರಿತ ಮಾಧವ ನಾಯಕ ಕೂಡಲೇ ಆಸ್ಪತ್ರೆಗೆ ಧಾವಿಸಿದರು. ಅಲ್ಲಿನ ವೈದ್ಯಾಧಿಕಾರಿಗಳ ಜೊತೆ ಜಗಳವಾಡಿದರು. ಆ ವೇಳೆ ವೈದ್ಯರು ಸಹ ತಮ್ಮ ಅಸಹಾಯಕತೆ ತೋಡಿಕೊಂಡರು. `ಮೆದುಳಿನ ರಕ್ತಸ್ರಾವ ಹೆಚ್ಚಾದರೆ ರೋಗಿ ಬದುಕುವ ಸಾಧ್ಯತೆ ಕಡಿಮೆ. ಪಾರ್ಶವಾಯುವಿಗೆ ಸಹ ರೋಗಿ ಒಳಗಾಗಬಹುದು’ ಎಂದು ಮಾಧವ ನಾಯಕ ಮನವರಿಗೆ ಮಾಡಿದರು. ಇದಾದ ನಂತರ ಕೊನೆಗೆ ರೋಗಿಯ ಪ್ರಾಣ ಉಳಿಸುವುದಕ್ಕಾಗಿ ಸ್ಕಾನಿಂಗ್ ನಡೆಸಿ, ಚಿಕಿತ್ಸೆ ಶುರು ಮಾಡಿದರು. ಪ್ರಸ್ತುತ ವಿಶ್ವನಾಥ ಗಾಂವ್ಕರ್ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಾಗಿಯೂ ಪೂಣೆಯಿಂದ ಅಧಿಕೃತ ಸ್ಕಾನಿಂಗ್ ವರದಿ ಬಂದಿಲ್ಲ!
`ರೋಗಿಗಳ ಪ್ರಾಣದ ಜೊತೆ ಆಟವಾಡುವ ಇಂಥ ನಿಯಮವನ್ನು ಸರ್ಕಾರ ಹಿಂಪಡೆಯಬೇಕು’ ಎಂದು ಮಾಧವ ನಾಯಕ ಆಗ್ರಹಿಸಿದರು.
ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದದ್ದೇನು? ಮಾಧವ ನಾಯಕರು ವೈದ್ಯರ ಮನವೊಲೈಸಿದ್ದು ಹೇಗೆ? ವಿಡಿಯೋ ಇಲ್ಲಿ ನೋಡಿ..