ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಿಸುವಂತೆ ಜಿಲ್ಲಾಡಳಿತ ಸೂಚಿಸಿದರೂ ಅದನ್ನು ಉಲ್ಲಂಘಿಸಿ ಕಾರವಾರದ ಕಿಮ್ಸ್ ಆವಾರದಲ್ಲಿ ರಾಸಾಯನಿಕ ಬಣ್ಣ ಬಳಸಿ ಹಬ್ಬ ಆಚರಿಸಿದರು. ದೊಡ್ಡ ಸದ್ದಿನ ಪಟಾಕಿ, ಡಿಜೆ ಬಳಸಿದ ವೈದ್ಯ ವಿದ್ಯಾರ್ಥಿಗಳು ಗಣೇಶ ಉತ್ಸವದ ಹೆಸರಿನಲ್ಲಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ತೊಂದರೆ ನೀಡಿದರು. ಸುಮಾರು ಮುಕ್ಕಾಲು ಗಂಟೆಗಳ ಕಾಲ ಪಟಾಕಿ, ಡಿಜೆ ಹಾಗೂ ರಾಸಾಯನಿಕ ಬಣ್ಣಗಳ ಮಿಶ್ರಣದಿಂದ ಆಸ್ಪತ್ರೆಯ ಆವರಣ ಹದಗೆಟ್ಟಿದ್ದು, ವೈದ್ಯಕೀಯ ವಿದ್ಯಾರ್ಥಿಗಳ ನಡೆಗೆ ಬಹುತೇಕರು ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ವಿದ್ಯಾರ್ಥಿಗಳು ಮಕ್ಕಳ ವಾರ್ಡಿನ ಕಡೆ ಸೇರಿ ಅಲ್ಲಿ ಪಟಾಕಿ ಸಿಡಿಸಿದರು. ಇದರಿಂದ ಸಣ್ಣ ಮಕ್ಕಳು ಬೆಚ್ಚಿ ಬಿದ್ದರು. ನಂತರ ಇತರೆ ರೋಗಿಗಳು ಇರುವ ಕಡೆ ತೆರಳಿ ರಾಸಾಯನಿಕ ಹೊಗೆ ಬಿಡುವ ಸುರಸುರ ಬತ್ತಿಗಳನ್ನು ಅಂಟಿಸಿದರು. ದೊಡ್ಡದಾಗಿ ಡಿಜೆ ಸದ್ದು ಹಾಕಿಕೊಂಡು ಅಲ್ಲಿಂದ ಬಂದ ಹಾಡಿಗೆ ಕುಣಿದು ಕುಪ್ಪಳಿಸಿದರು. ಬಾಣಂತಿ ವಾರ್ಡ, ಮಕ್ಕಳ ವಾರ್ಡ ಐಸಿಯು ಸೇರಿ ಹಲವು ಬಗೆಯ ರೋಗಿಗಳು ಅಲ್ಲಿದ್ದರೂ ಅವರ ಕಾಳಜಿಯ ಬಗ್ಗೆ ಯಾರೂ ಗಮನಹರಿಸಲಿಲ್ಲ.
ಕಿಮ್ಸ ಆವರದಲ್ಲಿ ಎಲ್ಲರೂ ಸೇರಿ ಗಣಪತಿ ಕೂರಿಸಿದ್ದರು. ಐದನೇ ದಿನವಾದ ಬುಧವಾರ ಸಂಜೆ ಅದನ್ನು ವಿಸರ್ಜಿಸುವ ತಯಾರಿ ನಡೆಸಿದ್ದರು. ಅದಕ್ಕೂ ಮುನ್ನ ದೊಡ್ಡ ಮೆರವಣಿಗೆ ನಡೆಸಿ ಕುಣಿದು ಕುಪ್ಪಳಿಸಿದರು. ವೈದ್ಯ ವಿದ್ಯಾರ್ಥಿಗಳ ನಡತೆಗೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಅವರ ಮಾತನ್ನು ಸಹ ಯಾರೂ ಕೇಳುವ ಹಾಗಿರಲಿಲ್ಲ. ಈ ಅವಧಿಯಲ್ಲಿ 300ಕ್ಕೂ ಅಧಿಕ ರೋಗಿಗಳು ಆಸ್ಪತ್ರೆಯಲ್ಲಿದ್ದರು. ವೈದ್ಯ ವಿದ್ಯಾರ್ಥಿಗಳ ಗಲಾಟೆಯಿಂದ ಅವರು ಕಂಗಾಲಾಗಿದ್ದರು.