ಮುಂಡಗೋಡ: ನ್ಯಾಯಾಲಯದ ಆದೇಶ ಮೀರಿ ಅಡಿಕೆ ಬೆಳೆ ಕೊಯ್ಲು ಮಾಡಿದವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ನ್ಯಾಯಾಲಯವೂ ಕೃಷಿ ಇಲಾಖೆ ಉಸ್ತುವಾರಿಗೆವಹಿಸಿದ್ದ ಅಡಿಕೆ ತೋಟಕ್ಕೆ ನುಗ್ಗಿದ ಇಬ್ಬರು ಅಲ್ಲಿನ ಫಸಲುಗಳನ್ನು ಸಾಗಿಸುತ್ತಿರುವಾಗ ಕೃಷಿ ಅಧಿಕಾರಿ ತಡೆದಿದ್ದಾರೆ.
ಮುಂಡಗೋಡು ತಾಲೂಕಿನ ಕೊಪ್ಪ ಗ್ರಾಮದ ಸರ್ವೆ ನಂ 59/4ರ ಭೂಮಿ ವಿವಾದದ ಮೂಲ. ವ್ಯಾಜ್ಯದ ಕಾರಣ ಭೂಮಿ ಕುರಿತಾಗಿ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದ್ದು, ಅಲ್ಲಿದ್ದ ಫಸಲು ಕಟಾವು ನಡೆಸಿ ಎಲ್ಲಾ ಪ್ರಕ್ರಿಯೆ ಮುಗಿಸುವಂತೆ ನ್ಯಾಯಾಲಯ ಕೃಷಿ ಇಲಾಖೆಗೆ ಆದೇಶಿಸಿತ್ತು. ಆ ಭೂಮಿಯಲ್ಲಿನ ಅಡಿಕೆ ಕೊಯ್ಲು ನಡೆಸಿ ಅದನ್ನು ಮಾರಾಟ ಮಾಡಿ ನ್ಯಾಯಾಲಯಕ್ಕೆ ಹಣ ಪಾವತಿಸುವುದು ಕೃಷಿ ಅಧಿಕಾರಿಗಳ ಕಾರ್ಯವಾಗಿತ್ತು. ಈ ಕೆಲಸಕ್ಕೆ ಅಡ್ಡಿಯಾದ ಹಿನ್ನಲೆ ಸಹಾಯಕ ಕೃಷಿ ಅಧಿಕಾರಿ ಕೃಷ್ಣಪ್ಪ ಮಹಾರೆಡ್ಡಿ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ.
ಡಿ 15ರಂದು ಕೃಷಿ ಇಲಾಖೆ ಜವಾಬ್ದಾರಿಯಲ್ಲಿದ್ದ ತೋಟ ಪ್ರವೇಶಿಸಿದ ಈಶ್ವರ ಗೌಡ ಪಾಟೀಲ ಹಾಗೂ ವಿನಾಯಕ ಪಾಟೀಲ್ ಅಲ್ಲಿದ್ದ ಅಡಿಕೆಯನ್ನು ಮರದಿಂದ ಇಳಿಸಿದ್ದಾರೆ. ತಮಗೆ ಸಂಬoಧಿಸಿದ ತೋಟ ಎಂದು ಅಲ್ಲಿದ್ದ 60 ಕ್ವಿಂಟಲ್ ಹಸಿ ಅಡಿಕೆಯನ್ನು ಬುಲೆರೋ ವಾಹನದಲ್ಲಿ ತುಂಬಿಕೊoಡಿದ್ದಾರೆ. ಈ ವಿಷಯ ಅರಿತ ಸಹಾಯಕ ಕೃಷಿ ಅಧಿಕಾರಿ ಕೃಷ್ಣಪ್ಪ ಮಹಾರೆಡ್ಡಿ ಅವರು ಆ ವಾಹನ ತಡೆದು ನಿಲ್ಲಿಸಿದರು. ಪೊಲೀಸರಿಗೆ ಫೋನ್ ಮಾಡಿ ಆ ಅಡಿಕೆಯನ್ನು ಜಪ್ತು ಮಾಡಿಸಿದರು. ನ್ಯಾಯಾಲಯದ ಆದೇಶ ಮೀರಿ ವರ್ತಿಸಿದ ಆ ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.