ಭಟ್ಕಳ: ಆರು ಬಗೆಯ ಸಂಚಾರಿ ನಿಯಮ ಉಲ್ಲಂಘಿಸಿ ಬೈಕ್ ಓಡಿಸಿದ ಯುವಕನಿಗೆ ನ್ಯಾಯಾಲಯ 25 ಸಾವಿರ ರೂ ದಂಡ ವಿಧಿಸಿದೆ.
ಕಂಠಪೂರ್ತಿ ಕುಡಿದಿದ್ದ ಸಂತೋಷ (ಹೆಸರು ಬದಲಿಸಿದೆ) ಎಂಬಾತ ಚಾಲನಾ ಪರವಾನಿಗೆ ಪತ್ರ, ಹೊಗೆ ಪ್ರಮಾಣ ಪತ್ರ, ವಿಮೆ, ವಾಹನ ನೊಂದಣಿ ಪತ್ರ ಇಲ್ಲದೇ ವಾಹನ ಚಲಾಯಿಸುವಾಗ ಸಿಕ್ಕಿ ಬಿದ್ದಿದ್ದ. ಆತ ಹೆಲ್ಮೇಟ್ ಸಹ ಧರಿಸಿರಲಿಲ್ಲ. ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಭಟ್ಕಳ ಜೆಎಮ್ಎಫ್ಸಿ ನ್ಯಾಯಾಲಯ ಬುಧವಾರ 28 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಕಳೆದ ನ.30ರಂದು ಇಲ್ಲಿನ ದಿನ ನ್ಯೂ ಇಂಗ್ಲೀಷ್ ಶಾಲೆಯ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ಭಟ್ಕಳ ಶಹರ ಠಾಣಾ ಎಸ್ಐ ನವೀನ ನಾಯ್ಕ ಅವರು ಆರೋಪಿಯನ್ನು ತಪಾಸಣೆಗೆ ಒಳಪಡಿಸಿದ್ದರು. ನಂತರ ಆರೋಪಿಯ ವಿರುದ್ಧ ಪ್ರಧಾನ ಮತ್ತು ಹೆಚ್ಚುವರಿ ಸಿವಿಲ್ ಹಾಗೂ ಜೆಎಮ್ಎಫ್ಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ದೀಪಾ ಅರಳಗುಂಡಿ ಶಿಕ್ಷೆ ಪ್ರಕಟಿಸಿದ್ದಾರೆ. ಸರಕಾರಿ ಅಭಿಯೋಜಕ ವಿವೇಕ ನಾಯ್ಕ ಸರಕಾರದ ಪರವಾಗಿ ವಾದ ಮಂಡಿಸಿದ್ದರು.