ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ನೀಡುತ್ತಿದ್ದ 349ರೂಪಾಯಿ ಕೂಲಿ ಮೊತ್ತವನ್ನು 370ರೂಪಾಯಿಗೆ ಏರಿಸಲಾಗಿದೆ. ಇದರೊಂದಿಗೆ ಬೇಸಿಗೆ ಕಾರಣ ಕಾರ್ಮಿಕರ ಕೆಲಸಕ್ಕೆ ಶೇ 30ರ ವಿನಾಯತಿಯನ್ನು ಸಹ ಕಲ್ಪಿಸಲಾಗಿದೆ!
ಈ ಬಗ್ಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಮಂಗಳವಾರ ಮಾಹಿತಿ ನೀಡಿದ್ದು, ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಕಾರಣ ಕೂಲಿಕಾರರ ಆರೋಗ್ಯ ಹಿತದೃಷ್ಟಿಯಿಂದ ಅವರು ಮಾಡುವ ಕೆಲಸದ ಪ್ರಮಾಣಕ್ಕೆ ವಿನಾಯಿತಿ ನೀಡಿರುವುದನ್ನು ಘೋಷಿಸಿದರು. `ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೆಲಸದ ಪ್ರಮಾಣದಲ್ಲಿ ಶೇ 30ರ ವಿನಾಯತಿ ಸಿಗಲಿದ್ದು, ಮೊದಲಿಗಿಂತಲೂ ಹೆಚ್ಚಿನ ವೇತನ ಸಿಗುವ ಕಾರಣ ಊರಿನಲ್ಲಿಯೇ ಉದ್ಯೋಗ ಮಾಡಬೇಕು’ ಎಂದವರು ಕರೆ ನೀಡಿದರು.
`ನರೇಗಾ ಯೋಜನೆಯಡಿ ಅನುಮೋದಿತ ಗುರಿಯನ್ನು ಸಾಧಿಸಲು ಕ್ರಮವಹಿಸಬೇಕು’ ಎಂದು ಅಧೀನ ಅಧಿಕಾರಿಗಳಿಗೆ ಸೂಚಿಸಿದರು. `ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಗ್ಗಿಸಲು ಭೌಗೋಳಿಕ ವರದಿ ಅನುಸಾರ ಅವಶ್ಯಕತೆ ಇರುವಲ್ಲಿ ಕೊಳವೆ ಬಾವಿ ಮರುಪೂರಣ ಘಟಕ ನಿರ್ಮಿಸಬೇಕು. ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯತ್ಯಯವಾಗದಂತೆ ಅಗತ್ಯ ಮುತುವರ್ಜಿ ವಹಿಸಬೇಕು’ ಎಂದು ಸೂಚಿಸಿದರು.