ಯಲ್ಲಾಪುರ: ಪಟ್ಟಣ ಪಂಚಾಯತ ದಾಖಲೆ ಕಳ್ಳತನವಾದ ವಿಷಯದ ಬಗ್ಗೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, `ದಾಖಲೆ ಕಳವು ವಿಚಾರದಲ್ಲಿ ಅಧಿಕಾರಿಗಳ ಕುಮ್ಮಕ್ಕು ಇದೆ’ ಎಂದು ಪ ಪಂ ಸದಸ್ಯ ಸೈಯ್ಯದ್ ಕೈಸರ್ ಆರೋಪಿಸಿದರು. ತಕ್ಷಣ ಇದನ್ನು ನಿರಾಕರಿಸಿದ ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ `ಅಧಿಕಾರಿಗಳ ವಿರುದ್ಧ ಸುಳ್ಳು ಸುದ್ದಿ ಹಬ್ಬಿದೆ’ ಎಂದು ಸ್ಪಷ್ಠನೆ ನೀಡಿದರು.
ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿನ ದಾಖಲೆಗಳು ಕಳ್ಳತನವಾದ ಬಗ್ಗೆ ಕೆಲ ದಿನದ ಹಿಂದೆ ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ಪೊಲೀಸ್ ದೂರು ನೀಡಿದ್ದರು. ಈ ಪ್ರಕರಣದ ಕುರಿತು ಮಾತನಾಡಿದ ಸದಸ್ಯ ಸೈಯದ್ ಕೈಸರ್ `ಅಧಿಕಾರಿಗಳು ಸೂಚಿಸಿದ ಕಾರಣ ಇಬ್ಬರು ಕಚೇರಿಗೆ ಬಂದು ದಾಖಲೆ ಒಯ್ದಿದ್ದಾರೆ. ನಂತರ ಮರಳಿ ಕೊಡುವಂತೆ ತಿಳಿಸಿದ ಕಾರಣ ಅದನ್ನು ಮರಳಿಸಿದ್ದಾರೆ. ಹೀಗಿದ್ದರೂ ಅವರ ವಿರುದ್ಧ ದಾಖಲೆ ಕದ್ದ ಆರೋಪದ ಅಡಿ ಪೊಲೀಸ್ ದೂರು ದಾಖಲಿಸಲಾಗಿದೆ’ ಎಂದು ದೂರಿದರು. `ಆರೋಪಿ ಸ್ಥಾನದಲ್ಲಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಾದ ಹಿನ್ನಲೆ ಅವರು ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಮಕ್ಕಳು ಶಾಲೆಗೆ ಹೋದಾಗ ಅಲ್ಲಿಯೂ ಮಕ್ಕಳ ಬಳಿ ಈ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ. ಈ ರೀತಿಯ ವರ್ತನೆ ಸರಿಯಲ್ಲ’ ಎಂದು ಆಕ್ಷೇಪಿಸಿದರು.
ಇದಕ್ಕೆ ಸ್ಪಷ್ಠೀಕರಣ ನೀಡಿದ ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ `ಸಾರ್ವಜನಿಕರು ಕಚೇರಿಗೆ ನೀಡಿದ ಯಾವುದೇ ದಾಖಲೆಯನ್ನು ಮರಳಿ ಒಯ್ಯಲು ಸಾಧ್ಯವಿಲ್ಲ. ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ದಾಖಲೆ ಕಳ್ಳತನ ನಡೆದ ಬಗ್ಗೆ ದೂರು ನೀಡಲು ಅಧಿಕಾರವಿದ್ದು, ಸಾರ್ವಜನಿಕರ ಜಾಗೃತಿಗಾಗಿ ಈ ಕ್ರಮ ಜರುಗಿಸಲಾಗಿದೆ’ ಎಂದು ಹೇಳಿದರು.
`ಹಲಸ್ಕಂಡ ಭಾಗದ ಪೈಪ್ ಲೈನ್ ಕಾಮಗಾರಿಗೆ ಸಂಬಧಿಸಿ ಪಟ್ಟಣ ಪಂಚಾಯಗೆ ನೀಡಿದ ದಾಖಲೆಗಳು ಸಹ ಕಳ್ಳತನವಾಗಿದೆ. ಆದರೆ, ಆ ಬಗ್ಗೆ ಏಕೆ ಪೊಲೀಸ್ ದೂರು ನೀಡಿಲ್ಲ?’ ಎಂದು ಸದಸ್ಯೆ ಪುಷ್ಪಾ ನಾಯ್ಕ ಪ್ರಶ್ನಿಸಿದರು. `ಪೈಪ್ಲೈನ್ ಕಾಮಗಾರಿಯ ದಾಖಲೆ ಕಳ್ಳತನವಾಗಿಲ್ಲ. ಕಚೇರಿಯಲ್ಲಿಯೇ ಅದಲು ಬದಲಾಗಿದ್ದು, ಆ ಕಾಮಗಾರಿಗೆ ಸಂಬ0ಧಿಸಿದ ಬಿಲ್ ಪಾವತಿ ಮಾಡಲಾಗುತ್ತದೆ. ಆತಂಕ ಬೇಡ’ ಎಂದು ಮುಖ್ಯಾಧಿಕಾರಿ ಸುನೀಲ ಗಾವಡೆ ಸಮಜಾಯಿಶಿ ನೀಡಿದರು.
ಪ ಪಂ ಸಿಬ್ಬಂದಿ ಮೇಲೆ ಕೆಲವರು ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆ ಚರ್ಚೆ ನಡೆದಿದ್ದು, ಸಾರ್ವಜನಿಕ ಕೆಲಸಕ್ಕೆ ಅಡ್ಡಿ ಪಡಿಸಿದವರ ವಿರುದ್ಧವೂ ದೂರು ದಾಖಲಿಸುವುದಾಗಿ ಮುಖ್ಯಾಧಿಕಾರಿ ಎಚ್ಚರಿಸಿದರು.
ದಾಖಲೆ ಕಳ್ಳತನ ವಿಷಯದಲ್ಲಿ ಪ ಪಂ ಸಭೆಯಲ್ಲಿ ನಡೆದ ಚರ್ಚೆಯ ವಿಡಿಯೋ ಇಲ್ಲಿ ನೋಡಿ…