ಉದ್ದನೇಯ ಗಡ್ಡ, ದೊಡ್ಡದಾದ ಕನ್ನಡಕ, ತಲೆಯ ಮೇಲೆ ಕೆಂಪು ಬಟ್ಟೆ ಕಟ್ಟಿಕೊಂಡು 70ನೇ ವಯಸ್ಸಿನಲ್ಲಿಯೂ ಕಾಗದ ಪತ್ರಗಳೊಂದಿಗೆ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವವರು ಅಂಕೋಲಾ ಸುಂಕಸಾಳ ಬಳಿಯ ಕವಲಳ್ಳಿ ಪ್ರಕಾಶ ಆಚಾರಿ.
ಪ್ರಕಾಶ ಆಚಾರಿ ಅವರಿಗೆ ಇರುವಷ್ಟು ಕಾನೂನು ಹಾಗೂ ಅರಣ್ಯ ಜ್ಞಾನ ಆ ಭಾಗದ ಅರಣ್ಯ ಅಧಿಕಾರಿಗಳಿಗಿಲ್ಲ. ಹೀಗಾಗಿಯೇ ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿರುವ ಸೂಚನೆಯನ್ನು ಮೀರಿ ಅಂಕೋಲಾ ಅರಣ್ಯಾಧಿಕಾರಿಗಳು ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದವರಿಗೂ ನೋಟಿಸ್ ನೀಡಿದ್ದಾರೆ. `ಅಧಿಕಾರಿಗಳೇ ನೀವು ನಿಯಮ ಪಾಲಿಸುತ್ತಿಲ್ಲ. ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದವರಿಗೆ ತೊಂದರೆ ನೀಡುವ ಹಾಗಿಲ್ಲ’ ಎಂದು ಪ್ರಕಾಶ ಆಚಾರಿ ಸರ್ಕಾರಿ ನೌಕರರಿಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ. ಆದರೆ, ಅಜ್ಜನ ಮಾತು ಕೇಳುವ ಸಹನೆ ಆ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗಿಲ್ಲ!
ಸುಂಕಸಾಳ ಗ್ರಾ ಪಂ ವ್ಯಾಪ್ತಿಯ ಕವಲಳ್ಳಿ ಗ್ರಾಮದ ಸರ್ವೇ ನಂ 3ರಲ್ಲಿ ಪ್ರಕಾಶ ಆಚಾರಿ ವಾಸವಾಗಿದ್ದಾರೆ. 3 ಎಕರೆ 9 ಗುಂಟೆ ಪ್ರದೇಶವನ್ನು ಅವರು ಅತಿಕ್ರಮಿಸಿಕೊಂಡು ಅಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಬಾಳೆ, ಮಾವು, ಅಡಿಕೆ ಜೊತೆ ವಾಸದ ಮನೆಯನ್ನು ಸಹ ಅವರು ಅಲ್ಲಿ ಹೊಂದಿದ್ದು ಇದನ್ನು ಹೊರತುಪಡಿಸಿ ಅವರಿಗೆ ವಿಶ್ವದ ಯಾವ ಮೂಲೆಯಲ್ಲಿಯೂ ಅವರಿಗೆ ಬೇರೆ ಭೂಮಿ ಇಲ್ಲ. 35 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿದ್ದ ಅವರ ಮನೆಗೆ ಬೆಂಕಿ ಬಿದ್ದಿದ್ದು ಆಗ ಪರಿಹಾರ ಸಿಕ್ಕಿದ ದಾಖಲೆ, ಬಂಗಾರಪ್ಪ ಅವರು ನೀಡಿದ ಪಟ್ಟಾ, ಅತಿಕ್ರಮಣ ಕ್ಷೇತ್ರಕ್ಕೆ ಆದ ಜಿಪಿಎಸ್, ಮನೆಗೆ ತೆರಿಗೆ ಪಾವತಿಸಿದ ರಸೀದಿ ಸೇರಿ ಹತ್ತು ಹಲವು ದಾಖಲೆಗಳು ಅವರ ಬಳಿಯಿದೆ. ಈ ಎಲ್ಲಾ ದಾಖಲೆಗಳನ್ನು ಹಲವು ಬಾರಿ ಅವರು ಅರಣ್ಯ ಅಧಿಕಾರಿಗಳಿಗೆ ನೀಡಿದ್ದಾರೆ. ಆದರೆ, ಪ್ರತಿ ಬಾರಿ ಅಧಿಕಾರಿ ಬದಲಾದಾಗಲೂ ಹೊಸದಾಗಿ ದಾಖಲೆ ಪಡೆಯುತ್ತಾರೆ. ಇಲ್ಲವೇ ನೋಟಿಸ್ ನೀಡುತ್ತಾರೆ!
`ಕಾನೂನು ವ್ಯತಿರಿಕ್ತವಾಗಿ ವಿಧಿವಿಧಾನ ಅನುಸರಿಸದೇ ಅರಣ್ಯವಾಸಿಗಳ ಮೇಲೆ ಅರಣ್ಯಾಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಅರ್ಜಿ ವಿಚಾರಣೆ ಹಂತದಲ್ಲಿ 30 ದಿನಗಳಲ್ಲಿ ಒಕ್ಕಲೆಬ್ಬಿಸಲು ನೀಡಿದ ಆದೇಶದಿಂದ ಮತ್ತು ಅತಿಕ್ರಮಣ ಸ್ಥಳದಿಂದ ತೆರವುಗೊಳಿಸದೇ ಅತಿಕ್ರಮಣ ಸ್ಥಳದಲ್ಲಿರುವಂತೆ ಚರ ಮತ್ತು ಸ್ಥಿರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಹೊರಡಿಸಿದ ಆದೇಶ ಅರಣ್ಯವಾಸಿಗಳ ಆತಂಕಕ್ಕೆ ಕಾರಣವಾಗಿದೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಹೇಳಿದರು. `ಸುಪ್ರೀಂ ಕೋರ್ಟ ಆದೇಶದಂತೆ ಅರ್ಜಿ ಪುನರ್ ಪರಿಶೀಲನೆಯ ಹಂತದಲ್ಲಿ ಇರುವಂಥ ವೇಳೆ ಒಕ್ಕಲೆಬ್ಬಿಸಲು ನೀಡಿದ ಆದೇಶ ಅರಣ್ಯ ಅಧಿಕಾರಿಯ ಕಾನೂನು ಅಜ್ಞಾನದ ಪ್ರತೀಕವಾಗಿದೆ’ ಎಂದವರು ಪ್ರತಿಕ್ರಿಯಿಸಿದರು.
`ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳನ್ನು ಅರ್ಜಿ ವಿಚಾರಣೆ ಮುಗಿಯುವರೆಗೂ ಸಾಗುವಳಿಗೆ ಆತಂಕ ಮತ್ತು ಒಕ್ಕಲೇಬ್ಬಿಸಬಾರದು ಎಂದು ಕಾನೂನು ಹೇಳುತ್ತದೆ. ಆದರೆ, ಈ ನಿಯಮ ಪಾಲಿಸದೇ ಬಡ ಜನರಿಗೆ ಅಂಕೋಲಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೋಟಿಸ್ ನೀಡಿದ್ದಾರೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಸಹ ಆಕ್ರೋಶ ವ್ಯಕ್ತಪಡಿಸಿದರು.