ಯಲ್ಲಾಪುರದ ಹುತ್ಕಂಡ ರಾಮಲಿಂಗೇಶ್ವರ ದೇಗುಲ ಹಿಂದಿನ ಕಾಡಿನಲ್ಲಿದ್ದ ಶಾಸನದ ಸತ್ಯ ಇದೀಗ ಹೊರ ಬಂದಿದೆ. ಈ ಶಾಸನ 12ನೇ ಶತಮಾನದ್ದಾಗಿದ್ದು ಕದಂಬ ಸಾಮ್ರಾಜ್ಯ, ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಆಳ್ವಿಕೆಯ ವಿಷಯವನ್ನು ಬಹಿರಂಗಪಡಿಸಿದೆ.
ಕುವೆoಪು ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಮಾನವಶಾಸ್ತ ಪ್ರಾಧ್ಯಾಪಕ (ನಿವೃತ್ತ) ರಾಜಾರಾಮ ಹೆಗಡೆ ಅವರು ಈ ಶಾಸನದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಈ ವೇಳೆ ಹಲವು ಸಂಗತಿಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.
‘ಈ ಭಾಗವು ಪ್ರಾಚೀನ ಕಾಲದಲ್ಲಿ ಕದಂಬ ಸಾಮ್ರಾಜ್ಯದ ಭಾಗವಾಗಿತ್ತು. ನಂತರ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಆಳಿದ್ದಾರೆ. ಗೋವೆಯ ಕದಂಬರು ಕಲ್ಯಾಣದ ಚಾಳುಕ್ಯರ ಅಧೀನದಲ್ಲಿ ಇಲ್ಲಿ ಆಳ್ವಕೆ ನಡೆಸಿದ್ದಾರೆ. ಕಳಚೂರ್ಯರು ಚಾಳುಕ್ಯರ ಸಿಂಹಾಸನವನ್ನು ವಶಪಡಿಸಿಕೊಂಡ ನಂತರ, ಅವರ ಆಧಿಪತ್ಯವನ್ನು ನಿರಾಕರಿಸಿ ಗೋವೆಯ ಕದಂಬರು ಸ್ವತಂತ್ರವಾಗಿ ಈ ಭಾಗವನ್ನು ಆಳಿದ್ದಾರೆ. ಸೋದೆ ಅರಸರ ಅವನತಿವರೆಗೂ ಈ ಪ್ರದೇಶ ಅವರ ಆಳ್ವಿಕೆಗೆ ಒಳಪಟ್ಟಿತ್ತು’ ಎಂದು ಅವರು ವಿಶ್ಲೇಷಿಸಿದ್ದಾರೆ. ದೇವಾಲಯದ ಹಿಂಭಾಗದ ಕಾಡಿನೊಳಗೆ 2 ಸ್ಥಳಗಳಲ್ಲಿ ಒಟ್ಟು 9 ವೀರಗಲ್ಲು ಹಾಗೂ ಶಾಸನಗಳಿವೆ. ಅವುಗಳನ್ನು ಇತಿಹಾಸ ಸಂಶೋಧಕ ಜಗದೀಶ ಅಗಸಿಬಾಗಿಲು ಅವರ ಸಹಕಾರದೊಂದಿಗೆ ರಾಜಾರಾಮ ಹೆಗಡೆ ಪರಿಶೀಲಿಸಿದ್ದಾರೆ.
ಶಾಸನವೊಂದರಲ್ಲಿ ರಾಯಮುರಾರಿ ಸೋವಿದೇವ ಎಂಬ ಅರಸನನ್ನು ಬಿರುದಾವಳಿಗಳಸಹಿತ ವರ್ಣಿಸಲಾಗಿದ್ದು ವಿವರಗಳು ಅಸ್ಪಷ್ಟವಾಗಿವೆ. `ತಾರಣ ಸಂವತ್ಸರದ ಆಷಾಢ ಬಹುಳ ತದಿಗೆಯ ಬೃಹಸ್ಪತಿವಾರದಂದು ಹುಬನಹಳ್ಳಿಯ ಮೇಲೆ ಸೋವಿದೇವನ ನಾಯಕರು ದಾಳಿಮಾಡಿ ಹಸುಗಳನ್ನು ಸೆರೆಹಿಡಿದುಕೊಂಡು ಹೋಗುತ್ತಿರುವಾಗ ಅಂಬಳಿಯ ಜಾಯಿನಾಯಕನ ತಮ್ಮ ರಾಜೆಯನು ಹೋರಾಡಿ ಸೆರೆ ಹಿಡಿದ ಹಸುಗಳನ್ನು ಊರಿಗೆ ಮರಳಿಸಿ ಸುರಲೋಕ ಪ್ರಾಪ್ತನಾದನು. ನಾಡಿನ ಅರಸನು ಎರಡು ಸಿಂನೆ (ಸಿವನೆ-ಗದ್ದೆಯ ಅಳತೆ) ಭತ್ತದ ಗದ್ದೆ ಹಾಗೂ ಊರಿನ ದಕ್ಷಿಣದ್ವಾರದಲ್ಲಿದ್ದ ಮನೆ ದಾನವಾಗಿ ಕೊಟ್ಟರು. ಈ ಕಲ್ಲನ್ನು ಕಡಿದವನು ಅಂತರವಳ್ಳಿಯ ಕಾವ್ಯೋಜ ಹಾಗೂ ಬರೆದವನು ಸೇನಬೋವ ಮೈಲೆಯ’ ಎಂಬ ವಿಷಯ ಶಾಸನದಲ್ಲಿದೆ.
‘ಇಲ್ಲಿ ಕಾಣಿಸಿರುವ ಸೋವಿದೇವನು ಕಳಚೂರ್ಯ ರಾಯಮುರಾರಿ ಸೋವಿದೇವ (ಕ್ರಿಸ್ತಾಬ್ದ 1167-1176). ಈತ ಬಿಜ್ಜಳನ ಉತ್ತರಾಧಿಕಾರಿಯಾಗಿದ್ದ. ಈ ದಾಳಿ ನಡೆದ ತಾರಣ ಸಂವತ್ಸರವು 1164-65ರಲ್ಲಿ ಬರುತ್ತದೆ. ಇದು ಗೋವೆಯ ಕದಂಬರು ಹಾಗೂ ಕಳಚೂರ್ಯರ ನಡುವಿನ ಸಂಘರ್ಷದoತೆ ಕಾಣುತ್ತದೆ. ಇಲ್ಲಿ ಉಲ್ಲೇಖಿಸಿರುವ ಹುಬನಹಳ್ಳಿಯು ಹುತ್ಕಂಡದಿoದ ಕೆಲವೇ ಕಿಮೀ ದೂರದಲ್ಲೇ ಇರುವ ಇಂದಿನ ಹುಬ್ನಳ್ಳಿ ಎಂಬುದು ಸ್ಪಷ್ಟ. ಅಂಬಳಿ ಇಂದಿನ ಅಂಬುಳ್ಳಿಯಾಗಿರುವ ಸಾಧ್ಯತೆಯಿದೆ’ ಎಂದು ರಾಜಾರಾಮ ಹೆಗಡೆ ಅಂದಾಜಿಸಿದ್ದಾರೆ.
‘ಹುತ್ಕoಡವು ಕಲ್ಯಾಣದ ಚಾಲುಕ್ಯರ ಕಾಲದಿಂದಲೂ ಒಂದು ಪ್ರಾದೇಶಿಕ ಕೇಂದ್ರವಾಗಿತ್ತು. ವೀರರು ಮರಣಹೊಂದಿದಾಗ ಇಲ್ಲಿ ಅವರ ವೀರಗಲ್ಲುಗಳನ್ನು ಸ್ಥಾಪಿಸಲಾಗಿದೆ. ಇಲ್ಲಿನ ದೇವಾಲಯ ಅವಶೇಷಗಳು ತಿಳಿಸುವಂತೆ ಇಲ್ಲಿ ಶೈವ ಹಾಗೂ ವೈಷ್ಣವ ದೇವಾಲಯಗಳಿದ್ದವು. ವಿಸ್ತಾರವಾದ ಜನವಸತಿಯಿತ್ತು. ದೇವಿಯ ಬನದ ಅವಶೇಷಗಳಲ್ಲಿ ಅನೇಕ ಸಮಾಧಿಗಳು ಇವೆ. ಈ ಪಟ್ಟಣದ ನೀರಿನ ವ್ಯವಸ್ಥೆಗಾಗಿ ಒಂದು ಕೆರೆ ಇದ್ದಿರುವ ಸಾಧ್ಯತೆ ಕೂಡ ಇದೆ. ಇದೊಂದು ಪಟ್ಟಣವಾಗಿದ್ದು ವ್ಯಾಪಾರಿಗಳು, ಆಡಳಿತ ವರ್ಗದವರು, ಯೋಧರು, ಇವರೆಲ್ಲ ವಾಸವಿದ್ದ ಸ್ಥಳವಾಗಿತ್ತು’ ಎಂದವರು ವಿವರಿಸಿದ್ದಾರೆ.
`ಇಂಥ ಸ್ಥಳದ ಮಹತ್ವವನ್ನು ಸಾರುವ ವೀರಗಲ್ಲುಗಳನ್ನು ಸರಿಯಾಗಿ ಎತ್ತಿ ನಿಲ್ಲಿಸಿ ಮೇಲೆ ಒಂದು ಸೂರನ್ನು ನಿರ್ಮಿಸಿದಲ್ಲಿ ಮುಂದಿನ ಪೀಳಿಗೆಗಳಿಗೆ ಈ ಊರಿನ ಮಹತ್ವವನ್ನು ಅರಿತುಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ’ ಎಂದವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಶಾಸನದಲ್ಲಿನ ಬರಹಗಳೆಲ್ಲವೂ ಹಳೆಗನ್ನಡ ಭಾಷೆಯಲ್ಲಿದೆ.