ಕುಮಟಾ: ಇಳಿಜಾರಿನಲ್ಲಿ ಬೈಕ್ ಓಡಿಸುವಾಗ ನಿಯಂತ್ರಣ ತಪ್ಪಿ ಬಿದ್ದ ತಿಮ್ಮಣ್ಣ ಭಟ್ಟ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನಪ್ಪಿದ್ದಾರೆ.
ಮೂರೂರಿನ ತಿಮ್ಮಣ್ಣ ಸುಬ್ರಾಯ ಭಟ್ಟ (78) ಅವರು ವಿದ್ಯಾಕೇತನ ಶಾಲೆಯಿಂದ ತಮ್ಮ ಮನೆ ಕಡೆ ಸೋಮವಾರ ರಾತ್ರಿ ಬೈಕ್ ಓಡಿಸುತ್ತಿದ್ದರು. ತಮ್ಮ ಮನೆ ಬಳಿಯಿದ್ದ ಇಳಿಜಾರಿನಲ್ಲಿ ಅವರ ಬೈಕ್ ವೇಗ ಪಡೆದಿದ್ದು, ವಾಹನದ ಮೇಲಿನ ನಿಯಂತ್ರಣವನ್ನು ಅವರು ಕಳೆದುಕೊಂಡರು. ಪರಿಣಾಮ ಬೈಕಿನ ಜೊತೆ ಅವರು ನೆಲಕ್ಕೆ ಅಪ್ಪಳಿಸಿದರು.
ಇದರಿಂದ ತಿಮ್ಮಣ್ಣ ಭಟ್ಟ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಇದನ್ನು ನೋಡಿದವರು ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಿನ ಕಸ್ತೂರಿ ಬಾ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಡಿ 17ರಂದು ಅವರು ಅಲ್ಲಿಯೇ ಸಾವನಪ್ಪಿದರು.