ಯಲ್ಲಾಪುರ: ಜೋಡುಕೆರೆ ಬಳಿ ಅನಧಿಕೃತ ಮೀನು ಮಾರಾಟದ ಬಗ್ಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಮನವಿ ನೀಡಿದ ಒಂದೇ ದಿನದಲ್ಲಿ ಅಧಿಕಾರಿಗಳು ಅದನ್ನು ತೆರವು ಮಾಡಿದ್ದಾರೆ. ಆದರೆ, ನಾಲ್ಕು ತಿಂಗಳ ಹಿಂದೆಯೇ ತಟಗಾರ ಕ್ರಾಸಿನ ಬಳಿ ಅನಧಿಕೃತ ಮೀನು ಮಾರಾಟದ ಬಗ್ಗೆ ಮನವಿ ನೀಡಿದರೂ ಆ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಪಟ್ಟಣ ಪಂಚಾಯತ ಅಧಿಕಾರಿಗಳ ಈ ನಡೆಗೆ ತಟಗಾರದ ನರಸಿಂಹ ಭಟ್ಟ ಬೋಳಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಜೋಡಕೆರೆ ಬಳಿಯಿದ್ದ ಮೀನು ಮಾರಾಟಗಾರರನ್ನು ಪ ಪಂ ಸಿಬ್ಬಂದಿ ಒಕ್ಕಲೆಬ್ಬಿಸಿದರು. ಹೀಗಾಗಿ ಅವರೆಲ್ಲರೂ ತಟಗಾರ ಕ್ರಾಸಿನ ಬಳಿ ಬಂದು ರಸ್ತೆ ಬದಿ ವ್ಯಾಪಾರ ಮಾಡಿದರು. ಹೀಗಾಗಿ ಸಾರ್ವಜನಿಕ ಓಡಾಟಕ್ಕೆ ಸಮಸ್ಯೆಯಾಗಿದ್ದು, ಈ ಬಗ್ಗೆ ನರಸಿಂಹ ಭಟ್ಟ ಬೊಳಪಾಲ್ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
2024ರ ಜುಲೈ 15ರಂದು ತಟಗಾರ-ಹುಟಕಮನೆ ಭಾಗದ ನೂರಾರು ಜನ ಪಟ್ಟಣ ಪಂಚಾಯತ ಕಚೇರಿಗೆ ತೆರಳಿ ಅನಧಿಕೃತ ಮೀನು ಮಾರಾಟದ ಬಗ್ಗೆ ದೂರು ನೀಡಿದ್ದರು. ಆಗ ಪ ಪಂ ಅಧಿಕಾರಿಗಳು ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು. ಒಂದೆರಡು ಬಾರಿ ಅನಧಿಕೃತ ಮೀನು ಮಾರಾಟ ತಡೆದಂತೆ ಮಾಡಿದ ಪ ಪಂ ಸಿಬ್ಬಂದಿ ನಂತರ ಅನಧಿಕೃತ ಮೀನು ಮಾರಾಟ ಮಾಡುವವರ ಪರವಾಗಿಯೇ ಮಾತನಾಡಿದ್ದರು. 2023ರಲ್ಲಿ ಸಹ ಮನವಿ ಕೊಟ್ಟರೂ ಕ್ರಮ ಜರುಗಿಸಿಲ್ಲ.
ನಾಲ್ಕು ತಿಂಗಳ ಹಿಂದಿನ ಮನವಿ ಏನು? ಇಲ್ಲಿ ಓದಿ..: ಮತ್ಸ್ಯಕನ್ಯೆ ವಿರುದ್ಧ ಹೋರಾಟ
`ಇದೀಗ ಪ ಪಂ ಸದಸ್ಯರ ಎಚ್ಚರಿಕೆ ನಂತರ ಒಂದೇ ದಿನದಲ್ಲಿ ಜೋಡಕೆರೆ ಬಳಿ ಅನಧಿಕೃತ ವ್ಯಾಪಾರ ತೆರವು ಮಾಡಿ, ಅಲ್ಲಿದ್ದವರನ್ನು ತಟಗಾರ ಕ್ರಾಸಿನ ಬಳಿ ಕಳುಹಿಸಿದ್ದಾರೆ’ ಎಂದವರು ದೂರಿದರು. `ಅಧಿಕಾರಿಗಳು ಈ ರೀತಿ ತಾರತಮ್ಯ ನಡೆಯನ್ನು ಬಿಡಬೇಕು. ನೂರಾರು ಜನ ನೀಡಿದ ಮನವಿಗೂ ಸ್ಪಂದಿಸಬೇಕು’ ಎಂದವರು ಹೇಳಿದ್ದಾರೆ.