ಅತ್ಯಂತ ಮುಗ್ದತೆಯಿಂದ ನಮ್ಮ-ನಿಮ್ಮೆಲ್ಲರ ಜೊತೆ ಬೆರೆಯುತ್ತಿದ್ದ ಪದ್ಮಶ್ರೀ ಸುಕ್ರಿ ಗೌಡ ಅವರು ಇನ್ನಿಲ್ಲ. ಅನಾರೋಗ್ಯಕ್ಕೆ ಒಳಗಾದರೂ `ತನಗೆ ಏನೂ ಆಗಿಲ್ಲ’ ಎಂಬoತೆ ಜಾನಪದ ಹಾಡುಗಳನ್ನು ಹಾಡಿ ಸಂಸ್ಕೃತಿ ಉಳಿಸುವ ಪ್ರಯತ್ನದಲ್ಲಿದ್ದ ಅವರು ಗುರುವಾರ ನಸುಕಿನ 4 ಗಂಟೆಯ ವೇಳೆ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ.
ಹಾಲಕ್ಕಿ ಸಮುದಾಯದ ಸುಕ್ರಿ ಗೌಡ ಅವರು 88ನೇ ವಯಸ್ಸಿನಲ್ಲಿಯೂ ಆಯಾಸಗೊಳ್ಳದೇ, ಸಾವಿರಕ್ಕೂ ಅಧಿಕ ಜಾನಪದ ಹಾಡುಗಳನ್ನು ಹಾಡುತ್ತಿದ್ದರು. ಆ ಎಲ್ಲಾ ಹಾಡುಗಳು ಅವರಿಗೆ ಕಂಠಪಾಠವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಯಾರೇ ಅವರ ಬಳಿ ತೆರಳಿ ಮಾತನಾಡಿದರೂ ಅವರನ್ನು ತಮ್ಮ ಮಗುವಿನಂತೆ ಪ್ರೀತಿ ಮಾಡುತ್ತಿದ್ದರು. ಎಲ್ಲರೂ ಅವರನ್ನು ಪ್ರೀತಿಯಿಂದ `ಸುಕ್ರಜ್ಜಿ’ ಎಂದು ಕರೆಯುತ್ತಿದ್ದರು.
ಸುಕ್ರಿ ಗೌಡ ಅವರನ್ನು `ಜಾನಪದ ವಿಶ್ವಕೋಶ’ ಎಂದು ಬಣ್ಣಿಸಲಾಗಿತ್ತು. ಅವರಲ್ಲಿನ ಅಪಾರವಾದ ಜ್ಞಾನ-ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಹಾಲಕ್ಕಿ ಸಮುದಾಯದ ಧರಿಸಿನಲ್ಲಿಯೇ ಅವರು ಪ್ರಶಸ್ತಿಪಡೆದು ವಿಶ್ವದ ಗಮನಸೆಳೆದಿದ್ದರು. ಮಂಗಳವಾರ ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಹೋಗಿ ಬಂದಿದ್ದರು. ಚೇತರಿಸಿಕೊಂಡ ನಂತರ ಬುಧವಾರ ಸಂಜೆ ಹಾಡುಗಳನ್ನು ಹಾಡಿದ್ದರು. ತಡರಾತ್ರಿಯವರೆಗೂ ಅವರು ಎಂದಿನ ಲವಲವಿಕೆಯಿಂದಿದ್ದರು.
ಸುಕ್ರಿ ಗೌಡ ಅವರ ಬಗ್ಗೆ ಶಾಲಾ ಪಠ್ಯದಲ್ಲಿ ಸಹ ಪಾಠ ಅಳವಡಿಸಲಾಗಿದ್ದು, ಅವರನ್ನು ನೋಡಲು ರಾಜ್ಯದ ನಾನಾ ಭಾಗಗಳಿಂದ ಮಕ್ಕಳು ಬರುತ್ತಿದ್ದರು. ಅಂಕೋಲಾ ತಾಲೂಕಿನ ಬಡಗೇರಿಗೆ ಸುಕ್ರಜ್ಜಿ ವಿಳಾಸ ಹುಡುಕಿ ಬರುವವರ ಸಂಖ್ಯೆ ಸಾವಿರ ದಾಡಿತ್ತು. ಹೀಗೆ ಬರುವ ಪ್ರತಿಯೊಬ್ಬರಿಗೂ ಇಳಿ ವಯಸ್ಸಿನಲ್ಲಿಯೂ ಅವರು ಖುಷಿಯಿಂದ ಅತಿಥಿ ಸತ್ಕಾರ ಮಾಡುತ್ತಿದ್ದರು. ಪದ್ಮಶ್ರೀ ಸುಕ್ರಿ ಗೌಡ ಅವರಲ್ಲಿನ ಜಾನಪದ ಸಾಹಿತ್ಯ ದಾಖಲೆಯನ್ನಾಗಿಸುವ ಪ್ರಯತ್ನ ನಡೆದಿದ್ದರೂ ಅದು ಪೂರ್ತಿಯಾಗಿರಲಿಲ್ಲ.
ಮದ್ಯ ಮಾರಾಟದ ವಿರುದ್ಧವೂ ಸುಕ್ರಿ ಗೌಡ ಧ್ವನಿಯಾಗಿದ್ದರು. ಊರಿನಲ್ಲಿ ತಲೆ ಎತ್ತಿದ್ದ ಸರಾಯಿ ಅಂಗಡಿಗಳನ್ನು ಹೋರಾಟದ ಮೂಲಕವೇ ಬಂದ್ ಮಾಡಿಸಿದ್ದರು. ಇನ್ನು ಹಲವು ಹೋರಾಟದಲ್ಲಿ ಭಾಗವಹಿಸಿ ಅವರು ಜನತೆಗೆ ನ್ಯಾಯ ಕೊಡಿಸಿದ್ದರು. ಅವರ ನಿಧನ ಉತ್ತರ ಕನ್ನಡ ಜಿಲ್ಲೆಯ ಜನರ ಪಾಲಿಗೆ ಅತಿ ದೊಡ್ಡ ನಷ್ಟ.