ಅಂಕೋಲಾ: ಗಿಡ-ಮರಗಳ ಸಂರಕ್ಷಣೆಗಾಗಿ ತನ್ನ ಇಡೀ ಜೀವನ ಮುಡುಪಾಗಿಟ್ಟಿದ್ದ ತುಳಸಿ ಗೌಡ ಸೋಮವಾರ ಸಂಜೆ ಸಾವನಪ್ಪಿದ್ದಾರೆ. 87 ವರ್ಷದ ತುಳಸಿ ಗೌಡ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ನಡುವೆಯೂ ಅವರು ಗಿಡ-ಮರಗಳ ಆರೈಕೆ ಬಿಟ್ಟಿರಲಿಲ್ಲ.
ಅಂಕೋಲಾ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ಅವರು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಅರೆಕಾಲಿಕ ಉದ್ಯೋಗದಲ್ಲಿದ್ದರು. ಅಲ್ಲಿ ಲಕ್ಷಾಂತರ ಗಿಡಗಳ ಸಂರಕ್ಷಣೆ ಮಾಡಿದ್ದರು. ತಮ್ಮ ಮನೆ ಸೇರಿ ವಿವಿಧ ಪ್ರದೇಶಗಳಿಗೆ ತೆರಳಿ ಸ್ವತಃ ಗಿಡಗಳನ್ನು ನಾಟಿ ಮಾಡಿ ಬೆಳಸಿದ್ದರು. ಜೀವಿತದ ಕೊನೆ ಅವಧಿಯವರೆಗೂ ಗಿಡಗಳಿಗೆ ನೀರುಣಿಸುವುದನ್ನು ಅವರು ಮರೆತಿರಲಿಲ್ಲ.
ಒಂದು ಲೆಕ್ಕದ ಪ್ರಕಾರ ಪ್ರತಿ ವರ್ಷ 30 ಸಾವಿರಕ್ಕೂ ಅಧಿಕ ಗಿಡಗಳನ್ನು ತುಳಸಿ ಗೌಡ ಅವರು ನೆಡುತ್ತಿದ್ದರು. ತುಳಸಿ ಗೌಡರ ಸಾಧನೆಗೆ 2020ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಹಾಲಕ್ಕಿ ವೇಷದಲ್ಲಿಯೇ ಅವರು ವೇದಿಕೆ ಏರಿ ಪ್ರಶಸ್ತಿ ಪಡೆದಿದ್ದರು.