ಯಲ್ಲಾಪುರ: ಪಟ್ಟಣ ಪಂಚಾಯತದ ಸದಸ್ಯತ್ವ ಆಯ್ಕೆ ಬಯಸಿ ಹೊಟೇಲ್ ಕಾರ್ಮಿಕ ಗುರು ಗೋಸಾವಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿರುವ ಅವರು ನೂರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ನಡೆಸಿ ತಮ್ಮ ಉಮೇದುದಾರಿಕೆ ಸಲ್ಲಿಸಿದರು.
ಗುರು ಶಂಕರ್ ಗೋಸಾವಿ ಅವರು ನಗರದ ಹೊಟೇಲ್’ವೊಂದರಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಾರೆ. ಅತ್ಯಂತ ಶ್ರಮಜೀವಿಯಾದ ಅವರು ಮೊದಲಿನಿಂದಲೂ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಗೋಸಾವಿಗಲ್ಲಿಯ ಮತದಾರರ ಸಮೀಕ್ಷೆ ನಡೆಸಿದ ಕಾಂಗ್ರೆಸ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ಈ ಹಿಂದೆ ಈ ಭಾಗದ ಪ್ರತಿನಿಧಿಯಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಪ್ರಶಾಂತ ತಳವಾರ್ ಆಯ್ಕೆಯಾಗಿದ್ದರು. ಅನಾರೋಗ್ಯದಿಂದ ಅವರು ನಿಧನರಾದ ಹಿನ್ನಲೆ ಮರುಚುನಾವಣೆ ನಡೆಯುತ್ತಿದ್ದು, ಈ ಬಾರಿಯೂ ಕಾಂಗ್ರೆಸ್ ಆಯ್ಕೆಯಾಗುವ ಬಗ್ಗೆ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು. `ಸರಳ, ನಿಷ್ಠಾವಂತ ಕಾರ್ಯಕರ್ತನಿಗೆ ಅವಕಾಶ ನೀಡಿದ್ದರಿಂದ ಶಂಕರ್ ಗೋಸಾವಿ ಅವರ ಗೆಲುವು ಖಚಿತ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ಟ, ಮಾಜಿ ಅಧ್ಯಕ್ಷ ವಿ ಎಸ್ ಭಟ್ಟ ಹಾಗೂ ಪ್ರೇಮಾನಂದ ನಾಯ್ಕ ಅಭಿಪ್ರಾಯವ್ಯಕ್ತಪಡಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಮುಖರಾದ ಉಲ್ಲಾಸ ಶಾನಭಾಗ, ರಾಜು ನಾಯ್ಕ, ಮಂಜು ಪಿಳ್ಳೆ, ನಾಗರಾಜ ಅಂಕೋಲೇಕರ್, ಫೈರೋಜ್ ಶೇಖ್, ಎಂ ಡಿ ಮುಲ್ಲಾ, ಗಜಾನನ ಭಟ್ಟ ಇತರರು ಸೇರಿ ಮೆರವಣಿಗೆ ನಡೆಸಿದರು.