ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಅಕ್ರಮ ಜೂಜಾಟ ನಡೆಸುವವರನ್ನು ಹುಡುಕಿದ ಪೊಲೀಸರು ಅಂಥವರ ವಿರುದ್ಧ ನಿರಂತರ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ, ಇದೀಗ ಇಲ್ಲಿನ ಜಾತ್ರೆ-ನಾಟಕಗಳಿಗೆ ಬೇರೆ ಜಿಲ್ಲೆಗಳಿಂದ ಜೂಜಾಟಗಾರರು ಆಗಮಿಸುತ್ತಿರುವುದು ತಲೆಬಿಸಿಗೆ ಕಾರಣವಾಗಿದೆ.
ಭಟ್ಕಳ-ಹೊನ್ನಾವರ ಭಾಗದಲ್ಲಿ ನಡೆಯುವ ಜಾತ್ರೆ-ನಾಟಕ-ಯಕ್ಷಗಾನಗಳಿಗೆ ಕುಂದಾಪುರ ಭಾಗದಿಂದ ಗುಡುಗುಡಿ ಆಡಿಸುವವರು ಬರುತ್ತಿದ್ದಾರೆ. ಮುಂಡಗೋಡು ಭಾಗದಲ್ಲಿ ನಡೆಯುವ ಜಾತ್ರೆಗೆ ಹುಬ್ಬಳ್ಳಿ ಧಾರವಾಡ ಕಡೆಯಿಂದ ಅಕ್ರಮ ಜೂಜಾಟ ನಡೆಸುವವರು ಆಗಮಿಸುತ್ತಿದ್ದಾರೆ. ಇಲ್ಲಿನ ಜನರಿಗೆ ಆಮೀಷವೊಡ್ಡಿ ಹಣ ದೋಚಿ ಪರಾರಿಯಾಗುತ್ತಿರುವ ಅವರ ನಿಯಂತ್ರಣ ಪೊಲೀಸರಿಗೂ ತಲೆಬಿಸಿಯಾಗಿದೆ.
ಮಾರ್ಚ 16ರ ರಾತ್ರಿ ಧಾರವಾಡದ ಅಭಿಷೇಕ ಮೂಲಿಮನಿ (18) ಹಾಗೂ ಶಶಿಕುಮಾರ ಮೂಲಿಮನಿ (19) ಎಂಬಾತರು ಮುಂಡಗೋಡಿನ ಹುಲಿಹೊಂಡದ ದ್ಯಾಮವ್ವದೇವಿ ಜಾತ್ರೆಯಲ್ಲಿ ಗುಡು ಗುಡಿ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ರಾಜಾರೋಷವಾಗಿ ಜೂಜಾಡುತ್ತಿದ್ದವರ ಮೇಲೆ ಪಿಎಸ್ಐ ಪರಶುರಾಮ ಮಿರ್ಜಗಿ ದಾಳಿ ನಡೆಸಿದ್ದಾರೆ. ಬಣ್ಣ ಬಣ್ಣದ ಚಿತ್ರವಿರುವ ಪಟದ ಮೇಲೆ ಹಣ ಹೂಡುವಂತೆ ಆಮೀಷ ಒಡ್ಡುತ್ತಿದ್ದ ಆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.