ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಹಾಗೂ ಕಿರವತ್ತಿ ಗ್ರಾಮ ಪಂಚಾಯತದಲ್ಲಿ ಪಿಡಿಓ ಆಗಿ ಕೆಲಸ ಮಾಡಿಕೊಂಡಿದ್ದ ಯೋಗೇಂದ್ರ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ವಿಧಾನಸೌಧದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಯೋಗ್ರೇಂದ್ರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಣ್ಣಿಗೇರಿ ಗ್ರಾಮ ಪಂಚಾಯತದಲ್ಲಿ ಯೋಗೇಂದ್ರ ಪಿಡಿಓ ಆಗಿದ್ದರು. ನಂತರ ಕಿರವತ್ತಿ ಗ್ರಾಮ ಪಂಚಾಯತಗೆ ತೆರಳಿ ಕರ್ತವ್ಯ ನಿಭಾಯಿಸುತ್ತಿದ್ದರು. ಈ ವೇಳೆ ಅವರ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ನಡೆದಿದೆ ಎಂದು ಹೇಳಿ ದೊಡ್ಡ ರಂಪಾಟವನ್ನು ನಡೆಸಿದ್ದರು. ವಿವಿಧ ಕಾರ್ಯಕ್ರಮಗಳ ನಿರ್ವಹಣೆ, ಕಂಪ್ಯುಟರ್ ಕೆಲಸದಲ್ಲಿ ಚುರುಕಾಗಿದ್ದ ಪಿಡಿಓ ತಮ್ಮ ಕುತಂತ್ರ ಬುದ್ದಿ ಉಪಯೋಗಿಸಿ ಒಂದೆರಡು ಪ್ರಶಸ್ತಿಗಳನ್ನು ಸಹ ಅವರು ಪಡೆದಿದ್ದರು.
ಅದಾದ ನಂತರ ಅನೇಕರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕಾಸು ಪಡೆದು ಪರಾರಿಯಾಗಿದ್ದರು. ಪಿಡಿಓ ಯೋಗೇಂದ್ರ ಎಲ್ಲಿ ಹೋದರು? ಎಂದು ಸರ್ಕಾರಕ್ಕೆ ಸಹ ಅರಿವಾಗಿರಲಿಲ್ಲ. ಮೊದಲು ಅವರನ್ನು ಅಮಾನತು ಮಾಡಲಾಯಿತು. ನಂತರ 2020ರಲ್ಲಿ ಸೇವೆಯಿಂದ ವಜಾ ಮಾಡಲಾಗಿತ್ತು. ಈ ನಡುವೆ 2023ರಲ್ಲಿ ಮತ್ತೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 17 ಲಕ್ಷ ರೂ ಪಡೆದು ವಂಚಿಸಿದ್ದರು. ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಹ ಇನ್ನೊಬ್ಬರಿಂದ 1.20ಕೋಟಿ ರೂ ಹಣ ಪಡೆದು ಯಾಮಾರಿಸಿದ್ದರು.
ಆ ಹಣದಲ್ಲಿ ಶ್ರೀಲಂಕಾ, ದುಬೈ ತೆರಳಿ ಯೋಗೇಂದ್ರ ಮೋಜು-ಮಸ್ತಿ ಮಾಡಿಕೊಂಡಿದ್ದರು. ಇದೀಗ ಅವರು ಭಾರತಕ್ಕೆ ಮರಳುತ್ತಿರುವ ವಿಷಯ ಅರಿತ ಪೊಲೀಸರು ವಿಮಾನ ನಿಲ್ದಾಣದಲ್ಲಿಯೇ ವಶಕ್ಕೆ ಪಡೆದರು.