ಕುಮಟಾ: ಡಿಸೆಂಬರ್ ಅಂತ್ಯ ಸಮೀಪಿಸಿದರೂ ವೃದ್ಧರಿಗೆ ನವೆಂಬರ್ ತಿಂಗಳ ಪಿಂಚಣಿ ಹಣ ಕೈ ಸೇರಿಲ್ಲ. ಔಷಧ ಉಪಚಾರಗಳಿಗೆ ಅನುಕೂಲವಾಗುತ್ತಿದ್ದ ಹಣಕ್ಕಾಗಿ ವೃದ್ಧರು ಬ್ಯಾಂಕ್-ಅoಚೆ ಕಚೇರಿ ಅಲೆದಾಟ ನಡೆಸುತ್ತಿದ್ದಾರೆ.
60 ವರ್ಷ ಮೇಲ್ಪಟ್ಟವರಿಗೆ ಇಂದಿರಾ ಗಾಂಧಿ ಪೆನ್ಸನ್ ಯೋಜನೆ ಅಡಿ ಸರ್ಕಾರ 600 ರೂ ಪಿಂಚಣಿ ನೀಡುತ್ತದೆ. 65 ವರ್ಷ ಮೇಲ್ಪಟ್ಟವರಿಗೆ ಸಂದ್ಯಾ ಸುರಕ್ಷಾ ಯೋಜನೆ ಅಡಿ 1200ರೂ ಮಾಸಿಕ ಪಿಂಚಣಿ ನೀಡುತ್ತದೆ. ಪ್ರತಿ ತಿಂಗಳು 10ನೇ ತಾರಿಕಿನ ಒಳಗೆ ಪಿಂಚಣಿ ಹಣ ವೃದ್ಧರ ಖಾತೆಗೆ ಜಮಾ ಆಗುತ್ತದೆ. ಆದರೆ, ಡಿಸೆಂಬರ್ 21ರವರೆಗೂ ನವೆಂಬರ್ ತಿಂಗಳ ಹಣ ವೃದ್ಧರ ಕೈ ಸೇರಿಲ್ಲ.
ಅನೇಕ ವೃದ್ಧರಿಗೆ ಸರ್ಕಾರ ನೀಡುವ ಪಿಂಚಣಿ ಹಣವೇ ಆಸರೆಯಾಗಿದೆ. ಇದೇ ಹಣದಲ್ಲಿ ಹಲವರು ಔಷಧಿ ವೆಚ್ಚಗಳನ್ನು ಪಾವತಿಸುತ್ತಾರೆ. ಹೀಗಾಗಿ ಅವರ ಆರೋಗ್ಯ ಕಾಪಾಡಿಕೊಳ್ಳುವಿಕೆಗೂ ಪಿಂಚಣಿ ನೆರವಾಗುತ್ತಿದ್ದು, ಸಕಾಲದಲ್ಲಿ ಕಾಸು ಪಾವತಿ ಆಗದ ಕಾರಣ ಅವರೆಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ.
ಪಿಂಚಣಿ ಹಣ ಪಡೆಯುವುದಕ್ಕಾಗಿ ಕುಮಟಾ ಜನತಾ ಕಾಲೋನಿಯ ನನ್ನಿ ಸಾಬ್ ನಿತ್ಯವೂ ಅಂಚೆ ಕಚೇರಿ ಅಲೆದಾಟ ನಡೆಸಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ `ಹಣ ಜಮಾ ಆಗಿಲ್ಲ’ ಎಂಬ ಉತ್ತರ ನೀಡಿ ಅವರು ನಿರಾಸೆಯಿಂದ ಮನೆಗೆ ಮರಳುತ್ತಿದ್ದಾರೆ. `ಸರ್ಕಾರ ಕೂಡಲೇ ಈ ಬಗ್ಗೆ ಗಮನಿಸಿ, ಹಿರಿಯ ನಾಗರಿಕರ ಅನುಕೂಲಕ್ಕಾಗಿ ಪಿಂಚಣಿ ಹಣ ಜಮಾ ಮಾಡಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಿಸ್ ಆಗ್ರಹಿಸಿದ್ದಾರೆ.