ಸಪ್ಪೆ ಮುಖದ ಸಿಬ್ಬಂದಿ, ಉಡಾಫೆಯ ಮಾತು, ಗ್ರಾಹಕರ ಬಗ್ಗೆ ನಿರ್ಲಕ್ಷ ಸಾಮಾನ್ಯವಾಗಿರುವ ರಾಷ್ಟ್ರೀಕೃತ ಬ್ಯಾಂಕುಗಳು ಎಂದರೆ ಬಹುತೇಕ ಜನರಿಗೆ ಅಲರ್ಜಿ. ಆದರೆ, ಕಾರವಾರದ ಅಸ್ನೋಟಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆ ಈ ಎಲ್ಲದಕ್ಕಿಂತ ವಿಭಿನ್ನ. ಇದಕ್ಕೆ ಕಾರಣ ಅಲ್ಲಿ ವ್ಯವಸ್ಥಾಪಕರಾಗಿರುವ ಜನಸ್ನೇಹಿ ಅಧಿಕಾರಿ ಗೌಡೇಶ ಕೆ ಟಿ.
ಕಳೆದ ಒಂದು ವರ್ಷದ ಹಿಂದೆ ಅಸ್ನೋಟಿ ಕೆನರಾ ಬ್ಯಾಂಕ್’ಗೆ ಆಗಮಿಸಿದ ಗೌಡೇಶ ಕೆ ಟಿ ಅವರು ಅಲ್ಲಿನ ಬ್ಯಾಂಕಿoಗ್ ವ್ಯವಸ್ಥೆಯನ್ನು ಬದಲಾಯಿಸಿದರು. ನಗುಮುಖದ ಸೇವೆಯೊಂದಿಗೆ ಪ್ರತಿಯೊಬ್ಬ ಗ್ರಾಹಕರನ್ನು ಸ್ವಾಗತಿಸಿದರು. ಅನಕ್ಷರಸ್ತ ಗ್ರಾಹಕರು ಬಂದಾಗ ಅವರಿಗೆ ಸ್ವತಃ ಅರ್ಜಿ ಬರೆದುಕೊಟ್ಟು ಬ್ಯಾಂಕ್ ಸೇವೆ ಒದಗಿಸಿದರು. ಹೀಗಾಗಿ ಅಸ್ನೋಟಿಯ ಕೆನರಾ ಬ್ಯಾಂಕ್ ಇತರೆ ಬ್ಯಾಂಕುಗಳಿಗೆ ಮಾದರಿಯಾಗಿದ್ದು, ಈ ಸೇವೆ ನೆನೆದು ಅಸ್ನೋಟಿ ಶಿವಾಜಿ ಮಂದಿರದವರು ಬ್ಯಾಂಕ್ ವ್ಯವಸ್ಥಾಪಕ ಗೌಡೇಶ ಕೆ ಟಿ ಅವರಿಗೆ ಸನ್ಮಾನಿಸಿದರು.
ಗೌಡೇಶ ಕೆ ಟಿ ಅವರು ಚಿತ್ರದುರ್ಗ ಜಿಲ್ಲೆಯ ಮೊಣಕಾಲುಮೂರಿನವರು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ಕೃಷಿ ಎಂಎಸ್ಸಿ ಪದವಿ ಪಡೆದ ಅವರು ವೃತ್ತಿಗಾಗಿ ಆಯ್ಕೆ ಮಾಡಿಕೊಂಡಿದ್ದು ಬ್ಯಾಂಕಿoಗ್ ವಲಯ. ಬಡ ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಅಪಾರ ಕಾಳಜಿ. ಸದಾ ಮಾನವೀಯ ನೆಲೆಯಲ್ಲಿ ಕೆಲಸ ಮಾಡುವ ಅವರೆಂದರೆ ಅಸ್ನೋಟಿ ಶಿವಾಜಿ ಮಂದಿರದ ಮಕ್ಕಳಿಗೂ ಅಚ್ಚುಮೆಚ್ಚು. ಈ ಹಿನ್ನಲೆ ಗೌಡೇಶ ಕೆ ಟಿ ಅವರು ಶಿವಾಜಿ ಮಂದಿರ ಮಕ್ಕಳಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ಸಹ ನೀಡಿದ್ದಾರೆ.
ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವಿಕೆ, ಶಾಲೆಗೆ ಕಂಪ್ಯುಟರ್ ಕೊಡುಗೆ, ಶೌಚಾಲಯ ಕೊಠಡಿ ನಿರ್ಮಾಣಕ್ಕೆ ನೆರವು ಸೇರಿ ಅನೇಕ ಕೆಲಸಗಳಿಗೆ ಗೌಡೇಶ ಕೆ ಟಿ ಅವರು ಸಹಾಯ ಮಾಡಿದ್ದಾರೆ. ಎಸ್ಎಸ್ಎಲ್ಸಿ ಮಕ್ಕಳ ವಾರ್ಷಿಕ ಪರೀಕ್ಷೆಗೆ ಶುಭ ಕೋರುವ ಸಭಾ ಕಾರ್ಯಕ್ರಮದಲ್ಲಿ ಗೌಡೇಶ ಕೆ ಟಿ ಅವರ ಈ ಸೇವೆಯನ್ನು ಪರಿಗಣಿಸಿ ಗೌರವಿಸಲಾಯಿತು. ಈ ವೇಳೆ ಗೌಡೇಶ ಕೆ ಟಿ ಅವರು ಮಕ್ಕಳ ಅನುಕೂಲಕ್ಕಾಗಿ ಬಣ್ಣ ಬಣ್ಣ ಲೇಖನಿಗಳನ್ನು ಉಡುಗರೆಯಾಗಿ ನೀಡಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯ ಕೃಷ್ಣಾನಂದ ಸಾಳುಂಕೆ, ಶಾಲಾ ಮುಖ್ಯಾಧ್ಯಾಪಕ ದಿನೇಶ ಗಾಂವಕರ್, ಶಾಲೆಯ ಶಿಕ್ಷಕರಾದ ವಿಜಯಕುಮಾರ್ ನಾಯ್ಕ, ಜೆ.ಬಿ.ತಿಪ್ಪೇಸ್ವಾಮಿ, ರೂಪಾಲಿ ಸಾವಂತ, ಸಂತೋಷ ಕಾಂಬ್ಳೆ, ಪ್ರಮುಖರಾದ ನರೇಂದ್ರ ದೇಸಾಯಿ ಮೊದಲಾದವರು ಮಾತನಾಡಿ ಶುಭ ಕೋರಿದರು. ಭೋದಕೇತರ ಸಿಬ್ಬಂದಿ ಮಹಾದೇವ ಅಸ್ನೋಟಿಕರ್ ಉಪಸ್ಥಿತರಿದ್ದರು. ರಿದೀಶಾ ಸಂಗಡಿಗರು ಪ್ರಾರ್ಥಿಸಿದರು. ಗಣೇಶ ಎನ್ ಬಿಷ್ಟಣ್ಣನವರ ಸ್ವಾಗತಿಸಿ, ನಿರ್ವಹಿಸಿದರು.