ಯಲ್ಲಾಪುರದ ಬೀದಿ ಬೀದಿಗಳನ್ನು ಅತಿಕ್ರಮಿಸಿ ಮೀನು ಮಾರಾಟ ನಡೆಯುತ್ತಿದ್ದು, ಇದಕ್ಕೆ ಪ ಪಂ ಸದಸ್ಯ ಸತೀಶ ನಾಯ್ಕ ಹೆಸರು ತಳಕು ಹಾಕಿಕೊಂಡಿದೆ. ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ಅವರೇ ಪ ಪಂ ಸದಸ್ಯ ಸತೀಶ ನಾಯ್ಕ ಹೆಸರು ಹೇಳಿದ ಬಗ್ಗೆ `ವಿಜಯ ಕರ್ನಾಟಕ’ ವರದಿ ಪ್ರಕಟಿಸಿದ್ದು, `ಅಕ್ರಮ ಮೀನು ಮಾರಾಟಕ್ಕೆ ಹಾಗೂ ತನಗೆ ಯಾವುದೇ ಸಂಬoಧವಿಲ್ಲ’ ಎಂದು ಸತೀಶ ನಾಯ್ಕ ಹೇಳಿದ್ದಾರೆ.
ಫೆ 11ರಂದು ಯಲ್ಲಾಪುರ ಪಟ್ಟಣ ಪಂಚಾಯತ ಕಚೇರಿಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅಕ್ರಮ ಮೀನು ಮಾರಾಟದ ವಿರುದ್ಧ ಹಲವು ಸದಸ್ಯರು ಧ್ವನಿ ಎತ್ತಿದ್ದರು. ಮೀನು ಮಾರಾಟಕ್ಕೆ ತಡೆ ಒಡ್ಡದೇ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನಲೆ ಅಕ್ರಮ ಮೀನು ಮಾರಾಟಗಾರರನ್ನು ಪ ಪಂ ಅಧಿಕಾರಿಗಳು ಒಕ್ಕಲೆಬ್ಬಿಸಿ, ನಂತರ ಸಭೆ ನಡೆಸಿದ್ದರು.
ಈ ವೇಳೆ ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ `ಬೀದಿ ಬೀದಿಯಲ್ಲಿ ಮೀನು ಮಾರಾಟ ಮಾಡುವವರಿಗೆ ಜನಪ್ರತಿನಿಧಿಗಳ ಬೆಂಬಲವಿದೆ’ ಎಂಬ ಹೇಳಿಕೆ ನೀಡಿದ್ದರು. `ಯಾರ ಬೆಂಬಲವಿದೆ?’ ಎಂದು ಉಳಿದ ಸದಸ್ಯರು ಪ್ರಶ್ನಿಸಿದಾಗ `ಮಂಜುನಾಥ ನಗರ ಸದಸ್ಯ ಸತೀಶ ನಾಯ್ಕ ಅವರು ಮೀನು ಮಾರಾಟಗಾರರನ್ನು ಬೆಂಬಲಿಸುತ್ತಿದ್ದಾರೆ’ ಎಂದು ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ತಿಳಿಸಿದ ಬಗ್ಗೆ ವಿಜಯ ಕರ್ನಾಟಕ ಯಥಾವತ್ತು ವರದಿ ಪ್ರಕಟಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ ನಾಯ್ಕ `ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದ ಕಾರಣ ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದೆ. ನಾನು ಸಭೆಯಲ್ಲಿ ಇಲ್ಲದಿರುವ ವೇಳೆ ನನ್ನ ಹೆಸರು ಬಳಸಿಕೊಂಡಿದ್ದಾರೆ. ದಾತ್ರಿನಗರದಲ್ಲಿ ಮೂಲಭೂತ ಸೌಕರ್ಯ ಒದಗಿಸದೇ ವಸತಿ ನಿವೇಶನ ಹಸ್ತಾಂತರ, ಬೇಕಾಬಿಟ್ಟಿಯಾಗಿ ನಮೂನೆ-3 ವಿತರಣೆ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ ಕಾರಣ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆದಿದೆ’ ಎಂದವರು ಹೇಳಿದ್ದಾರೆ. `ಯಾವುದೇ ಕಾರಣಕ್ಕೂ ಹೋರಾಟಗಳನ್ನು ಹಿಂಪಡೆಯುವುದಿಲ್ಲ. ಅಕ್ರಮ ಲೇಔಟ್ ಹಸ್ತಾಂತರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದು ನಿಶ್ಚಿತ’ ಎಂದವರು ಎಚ್ಚರಿಕೆ ನೀಡಿದ್ದಾರೆ.