ಕುಮಟಾ: `ಅಮಾಯಕ ಪುರುಷರ ಮೇಲೆ ಕೆಲ ಮಹಿಳೆಯರಿಂದ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಪೊಲೀಸರಿಗೂ ಮನವಿ ಸಲ್ಲಿಸಿದೆ.
`ನ 19ರಂದು ಅಂತರಾಷ್ಟ್ರೀಯ ಪುರುಷ ದಿನ ಎಂದು ಆಚರಿಸಲಾಗುತ್ತದೆ. ಆದರೆ, ಪುರುಷರ ಮೇಲೆ ನಡೆಯುವ ದೌರ್ಜನ್ಯಗಳು ಅನೇಕ ಸಲ ಹೊರ ಪ್ರಪಂಚಕ್ಕೆ ಬರುತ್ತಿಲ್ಲ. ಪುರುಷರ ಮೇಲೆ ಸುಳ್ಳು ಪ್ರಕರಣಗಳ ದಾಖಲಿಸುವಿಕೆ, ಅವರ ಮಾನ ಹರಾಜು ಸೇರಿ ಹಲವು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ’ ಎಂಬುದು ಜನಸಾಮಾನ್ಯ ಸಮಾಜ ಕಲ್ಯಾಣ ಕೇಂದ್ರದವರ ದೂರು.
`ಸರ್ಕಾರಿ ಸೇವೆಯಲ್ಲಿರುವ ಪುರುಷರು ಸಹ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಖಾಸಗಿ ವಲಯದಲ್ಲಿ ಸಹ ಸಾಕಷ್ಟು ಪ್ರಮಾಣದಲ್ಲಿ ಮಹಿಳೆಯರಿಂದ ದೌರ್ಜನ್ಯ ನಡೆದಿದೆ. ಇದರಿಂದ ಮಾನಸಿಕ ಒತ್ತಡಕ್ಕೆ ಸಿಲುಕುವ ಪುರುಷರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕು’ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಕುಮಟಾ ಸಿಪಿಐ ಎಂ ಯೋಗೇಶ ಅವರ ಮೂಲಕ ಪೊಲೀಸ್ ಅಧೀಕರಿಗೆ ಪತ್ರ ರವಾನಿಸಿದರು.
`ಕೆಲವು ಪೊಲೀಸ್ ಠಾಣೆಗಳಲ್ಲಿ ಮಹಿಳೆಯರು ದೂರು ನೀಡಿದ ತಕ್ಷಣ ಅದನ್ನು ಸ್ವೀಕರಿಸಿ ಪ್ರಕರಣ ದಾಖಲಿಸಲಾಗುತ್ತಿದೆ. ದೂರು ನೀಡಿದವರ ವಿವರ, ಹಿನ್ನಲೆ ಹಾಗೂ ಪುರುಷರ ನಡವಳಿಕೆ ಪರಿಗಣಿಸಿ ಮುಂದಿನ ಕ್ರಮ ಜರುಗಿಸಬೇಕು’ ಎಂದು ಈ ವೇಳೆ ಹಾಜರಿದ್ದ ಸುಧಾಕರ ನಾಯ್ಕ, ಕುಮಾರ್, ಕೃಷ್ಣ ಆಗ್ರಹಿಸಿದರು.