ಯಲ್ಲಾಪುರ: ವಜ್ರಳ್ಳಿಯ ತಾರಗಾರ ಬಳಿ ಲಕ್ಷ್ಮೀ ಭಟ್ಟ ಅವರ ತೋಟಕ್ಕೆ ನುಗ್ಗಿದ್ದ 4-5 ಜನ ಅಲ್ಲಿ ಬೆಳೆದಿದ್ದ ಅಡಿಕೆ ಫಸಲು ದೋಚಿ ಪರಾರಿಯಾಗಿದ್ದಾರೆ.
ಬೆಣ್ಣೆಜಡ್ಡಿಯ ಲಕ್ಷ್ಮೀ ತಿಮ್ಮಣ್ಣ ಭಟ್ಟ (71 ವರ್ಷ) ಅರಣ್ಯ ಅತಿಕ್ರಮಣದಲ್ಲಿ ತೋಟ ಮಾಡಿಕೊಂಡಿದ್ದರು. ಆ ತೋಟದಲ್ಲಿ ಬೆಳೆದ ಅಡಿಕೆ ಫಸಲು ಆಧರಿಸಿ ಅವರು ಜೀವನ ನಡೆಸುತ್ತಿದ್ದರು. ನ 16ರ ಬೆಳಗ್ಗೆ ತೋಟದ ಬಳಿ ಬಂದ ಲಕ್ಷ್ಮೀ ಭಟ್ಟ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅಲ್ಲಿ ಬಂದ ಲಕ್ಷ್ಮೀ ಭಟ್ಟ ಅವರ ಗಂಡನ ಮೊದಲ ಹೆಂಡತಿಯ ಮಗ ವೆಂಕಟ್ರಮಣ ಭಟ್ಟ ಭೂ ವ್ಯಾಜ್ಯದ ಬಗ್ಗೆ ಜಗಳ ಮಾಡಿದ್ದರು. ವೆಂಕಟ್ರಮಣ ಭಟ್ಟರ ಮಗ ವಿರಾಜ ಭಟ್ಟ ಸಹ ಈ ವೇಳೆ ಗಲಾಟೆ ಮಾಡಿದ್ದು, ನಂತರ ಅಲ್ಲಿಂದ ಹೋಗಿದ್ದರು.
ಅದೇ ದಿನ ಮಧ್ಯಾಹ್ನ 3 ಗಂಟೆ ವೇಳೆಗೆ ವಿರಾಜ ಭಟ್ಟ ಹಾಗೂ ವೆಂಕಟ್ರಮಣ ಭಟ್ಟ 4-5 ಜನರ ಜೊತೆ ತೋಟಕ್ಕೆ ನುಗ್ಗಿ ಅಲ್ಲಿದ್ದ ಅಡಿಕೆ ಬೆಳೆಗಳನ್ನು ಕೆಳಗಿಳಿಸಿದ್ದಾರೆ. `ಅಡಿಕೆ ಕೊಯ್ಯಬೇಡಿ’ ಎಂದು ಲಕ್ಷ್ಮೀ ಭಟ್ಟ ಕೂಗಿ ಹೇಳಿದರೂ ಅವರ ಮಾತನ್ನು ಅಲ್ಲಿದ್ದವರು ಪಾಲಿಸಿಲ್ಲ. 45 ಸಾವಿರ ರೂ ಮೌಲ್ಯದ 7 ಕ್ವಿಂಟಾಲ್ ಹಸಿ ಅಡಿಕೆ ಕದ್ದು ಅವರು ಅಲ್ಲಿಂದ ಪರಾರಿಯಾದ ಬಗ್ಗೆ ಲಕ್ಷ್ಮೀ ಭಟ್ಟರು ಇದೀಗ ಪೊಲೀಸ್ ದೂರು ನೀಡಿದ್ದಾರೆ.