ಶಿರಸಿ: ಮೈಸೂರಿನ ವ್ಯಾಪಾರಿಯಿಂದ ದಾಳಿಂಬೆ ಹಣ್ಣು ಖರೀದಿಸಲು ಹೋಗಿ ಶಿರಸಿ ಹಣ್ಣಿನ ವ್ಯಾಪಾರಿ 3 ಲಕ್ಷ ರೂ ಮೋಸ ಹೋಗಿದ್ದಾರೆ.
ಶಿರಸಿ ಮರಾಠಿಕೊಪ್ಪದ ಮುನೀರ ಅಹ್ಮದ್ ಪ್ರತಿ ಕೆಜಿಗೆ 140ರೂ ದರದಲ್ಲಿ ದಾಳಿಂಬೆ ಹಣ್ಣು ಖರೀದಿ ಬಗ್ಗೆ ಮಾತನಾಡಿದ್ದರು. ಮೈಸೂರಿನ ರಿಜ್ವಾನ್ ಅಹ್ಮದ್ ಎಂಬಾತರು ದಾಳಿಂಬೆ ಹಣ್ಣು ಪೂರೈಸುವ ಬಗ್ಗೆ ಭರವಸೆ ನೀಡಿದ್ದರು. 21 ಕ್ವಿಂಟಲ್ ದಾಳಿಂಬೆ ಕಳುಹಿಸುವಂತೆ ಮುನೀರ್ ಕೇಳಿಕೊಂಡಿದ್ದರು.
ಅಕ್ಟೊಬರ್ 5ರಂದು ರಿಜ್ವಾನ್ ಹೇಳಿದ ಕಡೆ ಲಾರಿಯನ್ನು ಕಳುಹಿಸಿದ್ದರು. ಆ ಲಾರಿ ಸಮಯಕ್ಕೆ ಸರಿಯಾಗಿ ಚಿಕ್ಕಬಳ್ಳಾಪುರ ತಲುಪಿತ್ತು. ಆ ವೇಳೆ `ದಾಳಿಂಬೆ ತೋಟದ ಕಾರ್ಮಿಕರಿಗೆ ಹಣ ಪಾವತಿಸಬೇಕು’ ಎಂದು ರಿಜ್ವಾನ್ 50 ಸಾವಿರ ರೂಪಾಯಿ ಪಡೆದಿದ್ದರು. ಅದಾದ ನಂತರ `ಲಾರಿಗೆ ದಾಳಿಂಬೆ ತುಂಬಲಾಗಿದೆ’ ಎಂದು ತಿಳಿಸಿ ಮಿಸ್ಟಾ ಎಂಬಾತರ ಖಾತೆಗೆ 2.50 ಲಕ್ಷ ರೂ ಹಾಕಿಸಿಕೊಂಡರು.
ಆದರೆ, ಅಲ್ಲಿಗೆ ತೆರಳಿದ ಲಾರಿಯಲ್ಲಿ ದಾಳಿಂಬೆಯೂ ಮರಳಲಿಲ್ಲ. ರಿಜ್ವಾನ್ ಕೊಟ್ಟ ಕಾಸು ಮರಳಿ ಪಾವತಿಸಿಲ್ಲ. ಗಾಡಿ ಕಳುಹಿಸಿದ ಬಾಡಿಗೆ ಸಹ ಹಣ್ಣಿನ ವ್ಯಾಪಾರಿಗೆ ಹುಟ್ಟಲಿಲ್ಲ. 3 ಲಕ್ಷ ರೂ ವಂಚನೆ ಮಾಡಿದ ಕಾರಣ ಇದೀಗ ಮುನೀರ ಅಹ್ಮದ್ ಪೊಲೀಸ್ ದೂರು ನೀಡಿದ್ದಾರೆ.