ಯಲ್ಲಾಪುರ: 50 ವರ್ಷ ಹೊಟೇಲ್ ಉದ್ಯಮ ನಡೆಸಿ ಅನುಭವವಿರುವ ಪ್ರಭು ಕುಟುಂಬದವರು ಐದು ವರ್ಷಗಳ ವಿರಾಮದ ನಂತರ ಇದೀಗ ವಿನೂತನ ಶೈಲಿಯಲ್ಲಿ ಅಚ್ಚುಕಟ್ಟಾದ ಆಹಾರ ನೀಡುವ `ಪ್ರಭು ಫುಡ್ ಪ್ಯಾಲೇಸ್’ ಸ್ಥಾಪಿಸಿದ್ದಾರೆ.
ಹುಬ್ಬಳ್ಳಿ – ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಯಲ್ಲಾಪುರ ಟಿಎಂಎಸ್ ಪೆಟ್ರೋಲ್ ಬಂಕ್ ಎದುರಿನ ವಿಶಾಲವಾದ ಜಾಗದಲ್ಲಿ ಮೂರು ಅಂತಸ್ಥಿನ ಆಹಾರ ಮಳಿಗೆ ಸೋಮವಾರ ಉದ್ಘಾಟನೆಯಾಗಿದೆ. `ಐದು ದಶಕದ ಹಿಂದೆ ವಿದ್ಯಾಧರ ಪ್ರಭು ಅವರು ಯಲ್ಲಾಪುರದಲ್ಲಿ ಹೊಟೇಲ್ ಶುರು ಮಾಡಿದ್ದರು. ಅವರ ಗರಡಿಯಲ್ಲಿ ಪಳಗಿದ ಪುತ್ರ ಉಲ್ಲಾಸ ಪ್ರಭು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು `ಪ್ರಭು ಪುಡ್ ಪ್ಯಾಲೇಸ್’ ನಡೆಸಿದ್ದರು. ಐದು ವರ್ಷದ ವಿರಾಮದ ನಂತರ ಇದೀಗ ಮತ್ತೆ ಹೊಸ ಉತ್ಸಾಹದೊಂದಿಗೆ ಉಲ್ಲಾಸ ಪ್ರಭು ಬಗೆ ಬಗೆಯ ಖಾದ್ಯ ನೀಡುವ ಮಳಿಗೆ ಶುರು ಮಾಡಿದ್ದಾರೆ’ ಎಂದು ಶಿಕ್ಷಕ ಸಂಜೀವ ಹೊಸ್ಕೇರಿ ಸಂತಸ ವ್ಯಕ್ತಪಡಿಸಿದರು.
`ಕರಾವಳಿಯ ಮೀನು ಖಾದ್ಯ ಹಾಗೂ ವಿಶೇಷ ಬಿರಿಯಾನಿ ಸವಿಯುವುದಕ್ಕಾಗಿ ಜನ ಪ್ರಭು ಪುಡ್ ಪ್ಯಾಲೇಸ್’ಗೆ ಬರುತ್ತಾರೆ. ಸಸ್ಯಹಾರ ಹಾಗೂ ಮಾಂಸಹಾರದ ಪ್ರತ್ಯೇಕ ವಿಭಾಗಗಳು ಇಲ್ಲಿವೆ’ ಎಂದು ಉಲ್ಲಾಸ ಪ್ರಭು ಮಾಹಿತಿ ನೀಡಿದರು. ಆಗಮಿಸಿದ ಅತಿಥಿಗಳನ್ನು ಹರಿಶ್ಚಂದ್ರ ಪ್ರಭು ಬರಮಾಡಿಕೊಂಡರು.
ಸoಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಈ ಹೊಟೇಲ್ ಉದ್ಘಾಟಿಸಿದ್ದು, ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಶುಭ ಹಾರೈಸಿದರು. ಉದ್ಯಮಿ ಬಾಲಕೃಷ್ಣ ನಾಯ್ಕ, ಕಟ್ಟಡದ ಒಳ ವಿನ್ಯಾಸ ರವಿ ಶಾನಭಾಗ, ಪ್ರಮುಖರಾದ ಮುರುಳಿ ಹೆಗಡೆ, ಸುಧೀರ ಬಲ್ಸೆ, ರಾಜಾ ಭಟ್ಟ ಇತರರು ನೂತನ ಆಹಾರ ಮಳಿಗೆ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಪೂಜಾ ಕಾರ್ಯ ನೆರವೇರಿಸಿದ ನಾರಾಯಣ ಭಟ್ಟ ಪುರಾಣಿಕ್, ಹೊಟೇಲ್ ಉದ್ಯಮ ಹಾಗೂ ಪ್ರಭು ಕುಟುಂಬಕ್ಕೆ ಇರುವ ನಂಟಿನ ಬಗ್ಗೆ ವಿವರಿಸಿದರು. ಮಧ್ಯಾಹ್ನ ನೂರಾರು ಜನ ಆಗಮಿಸಿ ಉತ್ತರ ಭಾರತ ಶೈಲಿಯ ಊಟ ಸವಿದರು.