`ಒಂದು ಮೊಟ್ಟೆ ಕಥೆ’ ಅಡಿ S News Digitel‘ನಲ್ಲಿ ಪ್ರಕಟವಾಗಿದ್ದ ವರದಿಯನ್ನು ಕಿಡಿಗೇಡಿಯೊಬ್ಬರು `ಪತಂಜಲಿ ಪ್ರಸನ್ನನ ಪ್ರೇಮ ಪುರಾಣ’ ಎಂದು ತಿರುಚಿ ಎಲ್ಲಡೆ ವೈರಲ್ ಮಾಡಿದ್ದು, ಇದು ಯಲ್ಲಾಪುರದಲ್ಲಿ ಪತಂಜಲಿ ಮಳಿಗೆ ನಡೆಸುವ ಪ್ರಸನ್ನ ಭಟ್ಟ ಅವರ ತಲೆಬಿಸಿಗೆ ಕಾರಣವಾಗಿದೆ.
ಅಂಗನವಾಡಿ ಶಿಕ್ಷಕಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಸರ್ಕಾರದಿಂದ ಬರುವ ಮೊಟ್ಟೆ ಹಾಗೂ ಪಡಿತರವನ್ನು ಸರಿಯಾಗಿ ನೀಡುತ್ತಿಲ್ಲ ಎಂಬುದು ಮೂಲ ಸುದ್ದಿಯ ಸಾರಾಂಶ. ಈ ಬಗ್ಗೆ ಊರಿನ ಹಲವರ ಜೊತೆ ಪ್ರಸನ್ನ ಭಟ್ಟ ಅವರು ಸಹ ಧ್ವನಿ ಎತ್ತಿದ್ದರು. ಪ್ರಕಟವಾದ ವರದಿಯಲ್ಲಿ ಪ್ರಸನ್ನ ಭಟ್ಟ ಅವರ ಸಾಮಾಜಿಕ ಕಳಕಳಿಯ ಬಗ್ಗೆ ಬಿತ್ತರಿಸಲಾಗಿದ್ದು, ಪ್ರಸನ್ನ ಭಟ್ಟ ಅವರು ಅಂಗನವಾಡಿ ಅವ್ಯವಹಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಸಹ ವರದಿ ಜೊತೆ ಪ್ರಸಾರವಾಗಿತ್ತು. ಅವರ ಸ್ನೇಹಿತರೊಬ್ಬರು ಸುದ್ದಿಯ ಲಿಂಕ್ ಜೊತೆ `ಪ್ರಸನ್ನನ ಪ್ರೇಮ ಪುರಾಣ’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.
ಇದನ್ನೂ ಓದಿ: ಒಂದು ಮೊಟ್ಟೆಯ ಕಥೆ: ಶಿಕ್ಷಕರ ದಿನದಂದೇ ಸಿಕ್ಕಿಬಿದ್ದ ಶಿಕ್ಷಕಿ
ಇದನ್ನು ನೋಡಿದ ಅನೇಕರು S News Digitel’ಗೆ ಕರೆ ಮಾಡಿ `ಪ್ರಸನ್ನನ ಪ್ರೇಮ ಪುರಾಣ’ ವರದಿ ಎಲ್ಲಿ? ಎಂದು ಪ್ರಶ್ನಿಸಿದ್ದರು. ಆದರೆ, S News Digitel ಈ ಬಗೆಯ ಯಾವುದೇ ವರದಿಯನ್ನು ಪ್ರಕಟಿಸಿಲ್ಲ. ಈ ನಡುವೆ ಪ್ರಸನ್ನ ಭಟ್ಟ ಸಹ ಸ್ನೇಹಿತನ ವಿರುದ್ಧ ಗರಂ ಆಗಿದ್ದಾರೆ. ಈ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿ `ಪ್ರಸನ್ನನ ಪ್ರೇಮ ಪುರಾಣ’ ಎಂದು ಸುದ್ದಿ ಹಬ್ಬಿಸಿದವರು ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.
`ಆತ ನನ್ನ ಸ್ನೇಹಿತನೇ ಆಗಿದ್ದರೂ ಜನಪ್ರತಿನಿಧಿಯಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಮನುಷ್ಯ. ಜವಾಬ್ದಾರಿ ಸ್ಥಾನದಲ್ಲಿದ್ದವರು ಈ ರೀತಿ ಬೇಜವಬ್ದಾರಿಯ ವರ್ತನೆ ಮಾಡಬಾರದು’ ಎಂದು ಪ್ರಸನ್ನ ಭಟ್ಟ ಪ್ರತಿಕ್ರಿಯಿಸಿದರು.